Select Page

ಭೀಕರ ರಸ್ತೆ ಅಪಘಾತ ; ಎರಡು ವಾಹನ ಬೆಂಕಿಗಾಹುತಿ

ಭೀಕರ ರಸ್ತೆ ಅಪಘಾತ ; ಎರಡು ವಾಹನ ಬೆಂಕಿಗಾಹುತಿ




ಬೆಳಗಾವಿ : ಬೆಳಗಾವಿ ಜಿಲ್ಲೆಯ ಕಿತ್ತೂರು ತಾಲೂಕಿನ ಎಂಕೆ ಹುಬ್ಬಳ್ಳಿ ಬಳಿ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ಶುಕ್ರವಾರ ರಾತ್ರಿ ಭೀಕರ ರಸ್ತೆ ಅಪಘಾತ ಸಂಭವಿಸಿ ಎರಡು ವಾಹನಗಳು ಬೆಂಕಿಗಾಹುತಿಯಾದ ಘಟನೆ ನಡೆದಿದೆ.

ಕಿತ್ತೂರು ಮಾರ್ಗವಾಗಿ ಬೆಳಗಾವಿ ಕಡೆಗೆ ಸಾಗುತ್ತಿದ್ದ ಹಾಲಿನ ಟ್ಯಾಂಕರ್ ಹಾಗೂ ಗೋವಿನ ಜೋಳದ ಚೀಲಗಳನ್ನು ಹೊತ್ತು ಸಾಗುತ್ತಿದ್ದ ಲಾರಿ ನಡುವೆ ಈ ದುರ್ಘಟನೆ ನಡೆದಿದೆ. ಹಾಲಿನ ಟ್ಯಾಂಕರ್ ವೇಗವಾಗಿ ಬಂದು ಲಾರಿಯ ಬಲಭಾಗಕ್ಕೆ ಡಿಕ್ಕಿ ಹೊಡೆದ ಪರಿಣಾಮ ಅಪಘಾತ ಸಂಭವಿಸಿದೆ.

ಡಿಕ್ಕಿಯ ರಭಸಕ್ಕೆ ಲಾರಿಯಲ್ಲಿ ಏಕಾಏಕಿ ಬೆಂಕಿ ಕಾಣಿಸಿಕೊಂಡು, ಕೆಲವೇ ಕ್ಷಣಗಳಲ್ಲಿ ಜ್ವಾಲೆಗಳು ಆವರಿಸಿವೆ. ಬೆಂಕಿಯ ಕೆನ್ನಾಲಿಗೆಗೆ ಲಾರಿಯಲ್ಲಿದ್ದ ಐನೂರಕ್ಕೂ ಹೆಚ್ಚು ಗೋವಿನ ಜೋಳದ ಚೀಲಗಳು ಸುಟ್ಟು ಕರಕಲಾಗಿವೆ.
ಘಟನೆಯ ವೇಳೆ ಇಬ್ಬರು ಚಾಲಕರು ಸಮಯಪ್ರಜ್ಞೆಯಿಂದ ವಾಹನಗಳಿಂದ ಹೊರಬಂದು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತ ತಪ್ಪಿದಂತಾಗಿದೆ.

ಸುದ್ದಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಹಾಗೂ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಬೆಂಕಿ ನಂದಿಸಲು ಹರಸಾಹಸ ಪಟ್ಟರು. ಕೆಲಕಾಲ ರಾಷ್ಟ್ರೀಯ ಹೆದ್ದಾರಿ 48ರಲ್ಲಿ ವಾಹನ ಸಂಚಾರಕ್ಕೂ ಅಡಚಣೆ ಉಂಟಾಯಿತು.

ಅಗ್ನಿಶಾಮಕ ಸಿಬ್ಬಂದಿಯ ತ್ವರಿತ ಕಾರ್ಯಾಚರಣೆಯಿಂದ ಬೆಂಕಿ ನಿಯಂತ್ರಣಕ್ಕೆ ಬಂದಿದ್ದು, ಹೆಚ್ಚಿನ ಅನಾಹುತ ತಪ್ಪಿದೆ. ಈ ಘಟನೆ ಕಿತ್ತೂರು ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

Advertisement

Leave a reply

Your email address will not be published. Required fields are marked *

error: Content is protected !!