
80 ನೌಕರರಿಗೆ ಕಿರುಕುಳ ; ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಅಧಿಕಾರಿ ವಿರುದ್ಧ ಪತ್ರ ಸಮರ

ಬೆಳಗಾವಿ : ತಹಶಿಲ್ದಾರ ಕಿರುಕುಳ ಹಾಗೂ ವರ್ಗಾವಣೆ ದಂಧೆಯಿಂದ ಬೇಸತ್ತು ಎಸ್ಡಿಎ ನೌಕರ ಆತ್ಮಹತ್ಯೆ ಮಾಡಿಕೊಂಡ ಪ್ರಕರಣದ ಬೆನ್ನಲ್ಲೇ ಸಧ್ಯ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಹಿರಿಯ ಅಧಿಕಾರಿಗಳ ವಿರುದ್ಧ ವಾರ್ಡನ್ ಗಳು ಸಿಡಿದೆದ್ದಿದ್ದಾರೆ.
ಹೌದು ಬೆಳಗಾವಿ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಕಡೇಚೂರ ವಿರುದ್ಧ ವಸತಿ ನಿಲಯಗಳ ಸಿಬ್ಬಂದಿಗಳು ಗಂಭೀರ ಆರೋಪ ಮಾಡಿದ್ದಾರೆ. ನಾವು ಎಷ್ಟೇ ಕೆಲಸ ಮಾಡಿದರು ಅನವಶ್ಯಕ ಕಿರುಕುಳ ನೀಡುತ್ತಿದ್ದು ಕೆಲಸದ ಉತ್ಸಾಹ ಕುಂದಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ಕೆಲಸ ನಿರ್ವಹಿಸುವ ಸುಮಾರು 80 ನೌಕರರು ಜಿಲ್ಲಾ ಅಧಿಕಾರಿ ವಿರುದ್ಧ ಆಕ್ರೋಶ ಹೊರಹಾಕಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಸೇರಿದಂತೆ ಹಿರಿಯ ಅಧಿಕಾರಿಗಳಿಗೆ ಪತ್ರ ಬರೆದಿದ್ದಾರೆ. ನಾವು ಎಷ್ಟೇ ಅಚ್ಚುಕಟ್ಟಾಗಿ ಕೆಲಸ ನಿರ್ವಹಿಸಿದರು ವಿನಾಕಾರಣ ಕಿರುಕುಳ ನೀಡುತ್ತಿರುವುದಾಗಿ ಆರೋಪಿಸಿದ್ದಾರೆ.

ಕಳೆದ ಒಂದುವರೆ ವರ್ಷದಿಂದ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ ಜಿಲ್ಲಾ ಅಧಿಕಾರಿ ಶಿವಪ್ರೀಯಾ ಅವರು ಕೆಳಹಂತದ ಅಧಿಕಾರಿಗಳಿಗೆ ಸಹಕಾರ ನೀಡುತ್ತಿಲ್ಲ. ವಿನಾಕಾರಣ ನೋಟಿಸ್ ಕೊಟ್ಟು ಅಮಾನತ್ತಿಗೆ ಶಿಪಾರಸ್ಸು ಮಾಡುತ್ತಿದ್ದಾರೆ. ಸೂಕ್ತ ಮಾರ್ಗದರ್ಶನ ನೀಡುವ ಬದಲಿಗೆ ಭಯದ ವಾತಾವರಣ ಸೃಷ್ಟಿ ಮಾಡುತ್ತಿದ್ದಾರೆ.
ವಸತಿ ನಿರ್ವಹಣೆ ಮಾಸಿಕ ಬಿಲ್ ತಯಾರಿಸಿ ಜಿಲ್ಲಾ ಕಚೇರಿಗೆ ಕಳುಹಿಸಿದರೆ ಅನಗತ್ಯವಾಗಿ ತಡ ಮಾಡುತ್ತಿದ್ದಾರೆ. ಇವರು ಹೇಳಿದಂತೆ ಬಿಲ್ ತಯಾರಿಸಿದರೆ ಮಾತ್ರ ಸಹಿ ಹಾಕಲಾಗುತ್ತಿದೆ. ವಸತಿ ನಿಲಯದ ನಿರ್ವಹಣೆಗೆ ಹಣ ನೀಡುತ್ತಿಲ್ಲ. ಏನಾದರೂ ತೊಂದರೆ ಉಂಟಾದರೆ ನಮ್ಮ ವಿರುದ್ಧ ಆರೋಪ ಮಾಡಲಾಗುತ್ತಿದೆ ಎಂದು ಆರೋಪಿಸಿದ್ದಾರೆ.