
ಅಗ್ನಿ ಅವಘಡದಲ್ಲಿ ಶೆಟ್ಟಿ ಕುಟುಂಬ ಆಹುತಿ ; ಬಾರ್ ಮಾಲಿಕನ ದುರಂತ ಅಂತ್ಯಕ್ಕೆ ಏನು ಕಾರಣ..?

ಉಡುಪಿ : ಮಧ್ಯರಾತ್ರಿ ನಿದ್ರೆಗೆ ಜಾರಿದ್ದ ವೇಳೆ ಸಂಭವಿಸಿದ ಭೀಕರ ಅಗ್ನಿ ದುರಂತದಲ್ಲಿ ಅಂಬಲಪಾಡಿಯ ಶೆಟ್ಟಿ ಬಾರ್ ಅಂಡ್ ರೆಸ್ಟೋರೆಂಟ್ ಮಾಲೀಕ ರಮಾನಂದ್ ಶೆಟ್ಟಿ ಹಾಗೂ ಅವರ ಪತ್ನಿ ಅಶ್ವಿನಿ ಚಿಕಿತ್ಸೆ ಫಲಿಸದೇ ಸಾವನ್ನಪ್ಪಿದ್ದಾರೆ. ಅಪ್ಪ-ಅಮ್ಮನ ದುರಂತ ಸಾವಿನಿಂದಾಗಿ ಇಬ್ಬರು ಮಕ್ಕಳು ಅನಾಥರಾಗಿದ್ದಾರೆ.
ಭಾನುವಾರ ರಾತ್ರಿ ಊಟ ಮಾಡಿ ಮಲಗಿದ್ದ ವೇಳೆ, ವಿದ್ಯುತ್ ಶಾರ್ಟ್ ಸರ್ಕ್ಯೂಟ್ನಿಂದ ಮನೆಗೆ ಬೆಂಕಿ ಬಿದ್ದಿತ್ತು. ಬೆಂಕಿಯ ಕೆನ್ನಾಲಿಗೆ ಇಡೀ ಮನೆಗೆ ಆವರಿಸಿದ್ದರಿಂದ ನಿದ್ರೆಗೆ ಜಾರಿದ್ದ ಇಡೀ ಕುಟುಂಬ ಸಂಕಷ್ಟಕ್ಕೆ ಸಿಲುಕಿತ್ತು. ಗಂಭೀರವಾಗಿ ಗಾಯಗೊಂಡಿದ್ದ ಬಾರ್ ಮಾಲೀಕ ರಮಾನಂದ್ ಶೆಟ್ಟಿ (55) ಸೋಮವಾರ ಬೆಳಗ್ಗೆ ಸಾವನ್ನಪ್ಪಿದ್ದರು.
ಇನ್ನು ಅಶ್ವಿನಿ (50) ಅವರಿಗೆ ಉಡುಪಿಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿತ್ತು. ಸಂಜೆ ವೇಳೆಗೆ ಚಿಕಿತ್ಸೆಗೆ ಸ್ಪಂದಿಸದೇ ಸಾವನ್ನಪ್ಪಿದ್ದಾರೆ. ಪತಿ ಸಾವನ್ನಪ್ಪಿದ ಕೆಲವೇ ಗಂಟೆಗಳಲ್ಲಿ ಅವರು ಸಾವನ್ನಪ್ಪಿದ್ದಾರೆ.
ಇನ್ನು ಗಂಭೀರವಾಗಿ ಗಾಯಗೊಂಡಿರುವ ಅವರಿಬ್ಬರ ಮಕ್ಕಳು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಇದೀಗ ಸಿಕ್ಕಿರುವ ಮಾಹಿತಿ ಪ್ರಕಾರ, ಮಕ್ಕಳಿಬ್ಬರು ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಆದರೆ, ಅಪ್ಪ-ಅಮ್ಮನ ಕಳೆದುಕೊಂಡ ಮಕ್ಕಳು ಅನಾಥರಾಗಿದ್ದಾರೆ.
ಸದ್ಯ ಇಬ್ಬರು ಮಕ್ಕಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ಮುಂದುವರಿದಿದೆ. ಹಿರಿಯ ಮಗನೊಂದಿಗೆ ರೀಲ್ಸ್ ಮಾಡಿ ಅಶ್ವಿನಿ ಖ್ಯಾತಿ ಪಡೆದಿದ್ದರು. ಬೆಂಕಿಯಿಂದ ಮನೆಯೆಲ್ಲ ಸಂಪೂರ್ಣವಾಗಿ ಸುಟ್ಟು ಹೋಗಿದ್ದು ಒಳಗಿದ್ದ ವಸ್ತುಗಳೆಲ್ಲ ನಾಶವಾಗಿವೆ.