ಜಪಾನ್‌ನ ಐಚಿ-ನಗೋಯಾದಲ್ಲಿ ನಡೆಯುತ್ತಿರುವ 2026ರ ಏಷ್ಯನ್ ಗೇಮ್ಸ್‌ನ ಗಲ್ಫ್ ಕ್ರೀಡಾಕೂಟದಲ್ಲಿ ಭಾರತದ 23 ವರ್ಷದ ಭರವಸೆಯ ಗಲ್ಫ್ ಆಟಗಾರ್ತಿ ಪ್ರಣವಿ ಶರತ್ ಅರಸ್ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಮಹಿಳೆಯರ ವೈಯಕ್ತಿಕ ಸ್ಟ್ರೋಕ್ ಪ್ಲೇ ವಿಭಾಗದಲ್ಲಿ ಅದ್ಭುತ ಪ್ರದರ್ಶನ ನೀಡಿದ ಅವರು ಚಿನ್ನದ ಪದಕವನ್ನು ತಮ್ಮದಾಗಿಸಿಕೊಂಡಿದ್ದಾರೆ. ಈ ಮೂಲಕ ಏಷ್ಯನ್ ಗೇಮ್ಸ್ ಗಲ್ಫ್ ಇತಿಹಾಸದಲ್ಲೇ ವೈಯಕ್ತಿಕ ವಿಭಾಗದಲ್ಲಿ ಚಿನ್ನದ ಪದಕ ಗೆದ್ದ ಭಾರತದ ಮೊದಲ ಮಹಿಳಾ ಗಲ್ಫರ್ ಎಂಬ ಹೊಸ ದಾಖಲೆಯನ್ನು ಪ್ರಣವಿ ಬರೆದಿದ್ದಾರೆ.

ಕೊನೆಯ ಸುತ್ತಿನವರೆಗೂ ಸಾಗಿದ ರೋಚಕ ಹಣಾಹಣಿ
ಟೂರ್ನಿಯುದ್ದಕ್ಕೂ ಅಮೋಘ ನಿಯಂತ್ರಣ ಮತ್ತು ಏಕಾಗ್ರತೆ ಪ್ರದರ್ಶಿಸಿದ ಪ್ರಣವಿ ಅರಸ್, ಅಂತಿಮ ಸುತ್ತಿನಲ್ಲಿ ತಮ್ಮ ನರಗಳ ಮೇಲಿನ ಹತೋಟಿ ಕಾಯ್ದುಕೊಂಡು ಅದ್ಭುತ ಆಟವಾಡಿದರು. ಇಡೀ ಪಂದ್ಯಾವಳಿಯಲ್ಲಿ ಒಟ್ಟು 15-ಅಂಡರ್-ಪಾರ್ 265 ಸ್ಕೋರ್ ದಾಖಲಿಸುವ ಮೂಲಕ ಅಗ್ರಸ್ಥಾನಕ್ಕೇರಿ ಚಾಂಪಿಯನ್ ಆಗಿ ಹೊರಹೊಮ್ಮಿದರು. ಈ ಮೂಲಕ ದೇಶಕ್ಕೆ ಸ್ಮರಣೀಯ ಹಾಗೂ ಐತಿಹಾಸಿಕ ಚಿನ್ನದ ಪದಕವನ್ನು ತಂದುಕೊಟ್ಟಿದ್ದಾರೆ.

ತಂಡ ವಿಭಾಗದಲ್ಲೂ ಭಾರತಕ್ಕೆ ಬೆಳ್ಳಿ ಸಂಭ್ರಮ
ವೈಯಕ್ತಿಕ ವಿಭಾಗದ ಜೊತೆಗೆ ಮಹಿಳೆಯರ ತಂಡ ವಿಭಾಗದಲ್ಲೂ ಭಾರತೀಯ ಆಟಗಾರ್ತಿಯರು ಜಂಟಿಯಾಗಿ ಸಶಕ್ತ ಪ್ರದರ್ಶನ ನೀಡಿ ಬೆಳ್ಳಿ ಪದಕಕ್ಕೆ ಮುತ್ತಿಕ್ಕಿದ್ದಾರೆ. ಭಾರತದ ಪ್ರಣವಿ ಅರಸ್, ಅದಿತಿ ಅಶೋಕ್ ಮತ್ತು ದೀಕ್ಷಾ ದಾಗರ್ ಅವರನ್ನೊಳಗೊಂಡ ಮೂವರ ಬಳಗವು ಒಟ್ಟು 14-ಅಂಡರ್ 546 ಸ್ಕೋರ್ ಕಲೆಹಾಕುವ ಮೂಲಕ ರನ್ನರ್ ಅಪ್ ಆಗಿ ಮೆರೆದಿದೆ. ಈ ಮೂವರೂ ಆಟಗಾರ್ತಿಯರು ಬೆಳ್ಳಿ ಪದಕದೊಂದಿಗೆ ತಾಯ್ನಾಡಿಗೆ ಮರಳಲಿದ್ದಾರೆ.