ಬೆಳಗಾವಿ : ಸವದತ್ತಿ ಯಲ್ಲಮ್ಮ ದೇವಿ ದರ್ಶನಕ್ಕೆ ತೆರಳುವ ವೇಳೆ ಕಾರು ಮತ್ತು ಲಾರಿ ನಡುವಿನ ಭೀಕರ ಮುಖಾಮುಖಿ ಡಿಕ್ಕಿಯಲ್ಲಿ, ಒಂದೇ ಕುಟುಂಬದ ಮೂವರು ಸ್ಥಳದಲ್ಲೇ ಮೃತಪಟ್ಟಿದ್ದು ಮೂವರು ಗಂಭೀರವಾಗಿ ಗಾಯಗೊಂಡ ಘಟನೆ ಸಂಭವಿಸಿದೆ.
ಗೋಕಾಕ ತಾಲೂಕಿನ ಮಾಲದಿನ್ನಿ ಕ್ರಾಸ್ ಬಳಿ ಭಾನುವಾರ ದುರ್ಘಟನೆ ಸಂಭವಿಸಿದೆ. ಮಹಾರಾಷ್ಟ್ರದ ಪುಣೆ ಮೂಲದವರಾದ ಓಂಕಾರ ಮಾಂದ್ರೆ (26), ರೇಷ್ಮಾ ಮಾಂದ್ರೆ (32) ದೇವಾಂಶ ಮಾಂದ್ರೆ (04) ಮೃತ ದುರ್ದೈವಿಗಳು.
ಶ್ರೀಕಾಂತ್ ಮಾಂದ್ರೆ, ವಂದನಾ ಮಾಂದ್ರೆ ಮತ್ತು ಹರ್ಷದಾ ಮಾಂದ್ರೆ ಗಂಭೀರವಾಗಿ ಗಾಯಗೊಂಡಿದ್ದು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಮಾಂದ್ರೆ ಕುಟುಂಬ ಗೋಕಾಕ್ ಮಾರ್ಗವಾಗಿ ಸವದತ್ತಿಗೆ ಕಾರಿನಲ್ಲಿ ತೆರಳುತ್ತಿದ್ದ ವೇಳೆ ಮಾಲದಿನ್ನಿ ಕ್ರಾಸ್ ಬಳಿ ಎದುರಿಗೆ ಬರುತ್ತಿದ್ದ ಲಾರಿಗೆ ಮುಖಾಮುಖಿ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಕಾರು ಸಂಪೂರ್ಣ ನಜ್ಜು ಗುಜ್ಜಾಗಿದೆ. ಈ ಕುರಿತು ಗೋಕಾಕ್ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





