Select Page

ಭಾರತ ತಂಡದ ಜೊತೆ ಇರುವ ತಿಲಕವಿಟ್ಟ ಈ ವ್ಯಕ್ತಿ ಯಾರು ಗೊತ್ತಾ…?

ಭಾರತ ತಂಡದ ಜೊತೆ ಇರುವ ತಿಲಕವಿಟ್ಟ ಈ ವ್ಯಕ್ತಿ ಯಾರು ಗೊತ್ತಾ…?

ಬೆಂಗಳೂರು : ಈತ ಕ್ರಿಕೆಟ್ ಆಟವನ್ನೇ ತನ್ನ ಉಸಿರಾಗಿಸಿಕೊಂಡ ಯುವಕ. ಹತ್ತನೇ ತರಗತಿ ನಂತರ ಮನೆ ಬಿಟ್ಟು ಕ್ರಿಕೆಟ್ ಗುಂಗಿನಲ್ಲೇ ಊರೂರು ಅಲೆದ. ಬದುಕಿನಲ್ಲಾದ ಕೆಲ ಅನಿರೀಕ್ಷಿತ ಬೆಳವಣಿಗೆಯಿಂದ ಕುಗ್ಗಿ ಹೋಗದೆ, ಪುಟಿದೆದ್ದು ನಿಂತ. ಕೇವಲ ಕ್ರಿಕೆಟ್ ಆಟಗಾರ ಆಗಬೇಕೆಂಬ ಕನಸು ಹೊತ್ತಿದ್ದ ಈ ಯುವಕ ರಾಘವೇಂದ್ರ ಸಧ್ಯ ಭಾರತೀಯ ಕ್ರಿಕೆಟ್ ತಂಡದ ಅವಿಭಾಜ್ಯ ಅಂಗ.‌

ಉತ್ತರ ಕನ್ನಡ ಜಿಲ್ಲೆಯ ಕುಮಟಾ ತಾಲೂಕಿನ ವಿವೇಕ ನಗರದ ನಿವಾಸಿ ರಾಘವೇಂದ್ರ. ಎಸ್ಎಸ್ಎಲ್ಸಿ ಮುಗಿಸಿದ ಈತ ಕೈಯಲ್ಲಿ ಕೇವಲ 21 ರೂ ಹಿಡಿದು 2000 ರಲ್ಲಿ ಹುಬ್ಬಳ್ಳಿಗೆ ಬಂದ. ಒಂದು ವಾರ ಹುಬ್ಬಳ್ಳಿ ಬಸ್ ನಿಲ್ದಾಣದಲ್ಲಿ ಮಲಗುತ್ತಾನೆ. ಅಲ್ಲಿಂದ ಪೊಲೀಸರು ಓಡಿಸಿದಾಗ ಪಕ್ಕದಲ್ಲೇ ಇದ್ದ ದೇವಸ್ಥಾನವೊಂದನ್ನು ಸೇರಿಕೊಳ್ಳುತ್ತಾನೆ. 10 ದಿನ ದೇವಸ್ಥಾನದಲ್ಲಿ ವಾಸ. ಅಲ್ಲಿಂದಲೂ ಹೊರ ನಡೆಯಬೇಕಾದ ಪರಿಸ್ಥಿತಿ ಎದುರಾದಾಗ ಬೇರೆ ದಾರಿ ಕಾಣದ ರಾಘವೇಂದ್ರ ಹತ್ತಿರದ ಸ್ಮಶಾನವೊಂದನ್ನು ಸೇರಿಕೊಳ್ಳುತ್ತಾನೆ.

ಸ್ಮಶಾನದಲ್ಲಿದ್ದ ಪಾಳು ಬಿದ್ದ ಕಟ್ಟಡವೇ ಮನೆಯಾಗುತ್ತದೆ. ಕ್ರಿಕೆಟ್ ಮೈದಾನದಿಂದ ತಂದ ಹರಕಲು ಮ್ಯಾಟನ್ನೇ ಹೊದಿಕೆ ಮಾಡಿಕೊಳ್ಳುತ್ತಾನೆ. ಈ ರೀತಿ ನಾಲ್ಕೂವರೆ ವರ್ಷ ಸ್ಮಶಾನದಲ್ಲೇ ಮಲಗುತ್ತಾನೆ ರಾಘವೇಂದ್ರ. ಈ ಮಧ್ಯೆ ಬಲಗೈ ಮುರಿದು ಹೋಗಿದ್ದ ಕಾರಣ ಕ್ರಿಕೆಟ್ ಆಡುವ ಕನಸಿಗೆ ಕಲ್ಲು ಬಿದ್ದಿರುತ್ತದೆ. ಮನೆ ಬಿಟ್ಟು ಬಂದಾಗಿದೆ, ವಾಪಸ್ ಹೋಗುವ ಮಾತೇ ಇಲ್ಲ ಎಂದುಕೊಂಡವನೇ ಕ್ರಿಕೆಟ್ ಕೋಚಿಂಗ್ ಕಡೆ ಗಮನ ಹರಿಸುತ್ತಾನೆ.

ಆರಂಭದಲ್ಲಿ ಹುಬ್ಬಳ್ಳಿಯಲ್ಲಿ ಕ್ರಿಕೆಟಿಗರಿಗೆ ಕೈಯಿಂದ ಚೆಂಡೆಸೆಯುತ್ತಾ, ಅವರ ಅಭ್ಯಾಸಕ್ಕೆ ನೆರವಾಗುತ್ತಾ ಇದ್ದವನಿಗೆ ಗೆಳೆಯನೊಬ್ಬ ಬೆಂಗಳೂರು ದಾರಿ ತೋರಿಸುತ್ತಾನೆ. ಬೆಂಗಳೂರಿಗೆ ಬಂದ ರಾಘವೇಂದ್ರನಿಗೆ ಆಶ್ರಯ ಕೊಟ್ಟದ್ದು Karnataka Institute of Cricket. ಅಲ್ಲಿಗೆ ಅಭ್ಯಾಸಕ್ಕೆಂದು ಬರುತ್ತಿದ್ದ ಕರ್ನಾಟಕದ ಕ್ರಿಕೆಟಿಗರಿಗೆ ಚೆಂಡೆಸೆಯುವುದು, ಬೌಲಿಂಗ್ ಮಷಿನ್’ನಲ್ಲಿ ಅಭ್ಯಾಸ ಮಾಡಿಸುವುದು ರಾಘವೇಂದ್ರನ ಕೆಲಸವಾಗಿತ್ತು.

ಹೀಗೇ ಒಂದು ದಿನ ಕರ್ನಾಟಕ ಮಾಜಿ ವಿಕೆಟ್ ಕೀಪರ್, ಹಾಲಿ ಅಂಡರ್-19 ತಂಡದ ಆಯ್ಕೆ ಸಮಿತಿ ಮುಖ್ಯಸ್ಥ ತಿಲಕ್ ನಾಯ್ಡು ಅವರ ಕಣ್ಣಿಗೆ ಬೀಳುತ್ತಾನೆ. ರಾಘವೇಂದ್ರನ ಕೆಲಸವನ್ನು ನೋಡಿದ ತಿಲಕ್ ನಾಯ್ಡು, ರಾಜ್ಯದ ಮತ್ತೊಬ್ಬ ಮಾಜಿ ಕ್ರಿಕೆಟಿಗ ಜಾವಗಲ್ ಶ್ರೀನಾಥ್ ಅವರಿಗೆ ಪರಿಚಯಿಸುತ್ತಾರೆ.

ಅದು ರಾಘವೇಂದ್ರನ ಬದುಕಿಗೆ ಸಿಕ್ಕ ದೊಡ್ಡ ತಿರುವು. ಹುಡುಗನ ಪ್ರಾಮಾಣಿಕತೆಯನ್ನು ಗಮನಿಸಿದ ಶ್ರೀನಾಥ್, ‘ಕರ್ನಾಟಕ ರಣಜಿ ತಂಡದ ಜೊತೆ ಇದ್ದು ಬಿಡು’ ಎಂದು ಅಲ್ಲಿಗೆ ಕರೆ ತಂದು ಸೇರಿಸುತ್ತಾರೆ. ಕ್ರಿಕೆಟ್ ಸೀಸನ್’ನಲ್ಲಿ ಕರ್ನಾಟಕ ತಂಡದ ಜೊತೆ ಕೆಲಸ.. ಇಲ್ಲಿ ಕೆಲಸವಿಲ್ಲದಿದ್ದಾಗ ಚಿನ್ನಸ್ವಾಮಿ ಕ್ರೀಡಾಂಗಣದ ಪಕ್ಕದಲ್ಲೇ ಇರುವ National Cricket Academyಯಲ್ಲಿ ಕೆಲಸ. ನೆನಪಿರಲಿ.. ಈ ರೀತಿ 3-4 ವರ್ಷ ಒಂದು ಪೈಸೆ ದುಡ್ಡು ಪಡೆಯದೆ ಕೆಲಸ ಮಾಡಿದ್ದ ರಾಘವೇಂದ್ರ. ಕೈಯಲ್ಲಿ ದುಡ್ಡಿಲ್ಲದ ಕಾರಣ ಎಷ್ಟೋ ದಿನ ಊಟವಿಲ್ಲದೆ ರಾತ್ರಿ ಕಳೆದದ್ದೂ ಇದೆ.

NCAನಲ್ಲಿದ್ದಾಗ ಬಿಸಿಸಿಐ level-1 ಕೋಚಿಂಗ್ ಕೋರ್ಸ್ ಪೂರ್ತಿಗೊಳಿಸುತ್ತಾನೆ. NCAಗೆ ಬರುತ್ತಿದ್ದ ಭಾರತ ತಂಡದ ಕ್ರಿಕೆಟಿಗರಿಗೆ ಅಭ್ಯಾಸ ಮಾಡಿಸುತ್ತಾ ಅವರ ನೆಚ್ಚಿನ ಹುಡುಗನಾಗಿ ಬಿಡುತ್ತಾನೆ.

ರಾಘವೇಂದ್ರನ ಪ್ರತಿಭೆಯನ್ನು ಸಚಿನ್ ತೆಂಡೂಲ್ಕರ್ ಬೇಗನೆ ಗುರುತಿಸುತ್ತಾರೆ. ಪರಿಣಾಮ 2011ರಲ್ಲಿ ಭಾರತ ತಂಡಕ್ಕೆ ಟ್ರೈನಿಂಗ್ ಅಸಿಸ್ಟೆಂಟ್ ಆಗಿ ಸೇರಿಕೊಳ್ಳುತ್ತಾನೆ. ಕಳೆದ 13 ವರ್ಷಗಳಿಂದ ಭಾರತ ತಂಡದ ಜೊತೆ ಇರುವ ರಾಘವೇಂದ್ರ ತಂಡದ ಯಶಸ್ಸಿನಲ್ಲಿ ಮಹತ್ವದ ಪಾತ್ರ ವಹಿಸುತ್ತಾ ಬಂದಿದ್ದಾನೆ. ರಾಘವೇಂದ್ರನ ನಿರಂತರ ಪರಿಶ್ರಮಕ್ಕೆ ಸಿಕ್ಕ ದೊಡ್ಡ ಪ್ರತಿಫಲ ಟಿ20 ವಿಶ್ವಕಪ್.

ಈ ಹುಡುಗ ಕ್ರಿಕೆಟ್ ಆಟಗಾರನಾಗಬೇಕೆಂಬ ಕನಸು ಕಂಡವ. ಕೈ ಮುರಿಯಿತು, ಕ್ರಿಕೆಟ್ ಕನಸು ಕಮರಿತು. ಅಲ್ಲಿ ಕಳೆದುಕೊಂಡದ್ದನ್ನು ಮತ್ತೆಲ್ಲೋ ಹುಡುಕಲು ಹೊರಟವನು ಇಂದು ಭಾರತದ ಟಿ20 ವಿಶ್ವಕಪ್ ವಿಕ್ರಮದ ರೂವಾರಿಗಳಲ್ಲೊಬ್ಬನಾಗಿ ನಿಂತಿದ್ದಾನೆ.

2017ರ ಚಾಂಪಿಯನ್ಸ್ ಟ್ರೋಫಿ ಟೂರ್ನಿಯ ವೇಳೆ ವಿರಾಟ್ ಕೊಹ್ಲಿ ಒಂದು ಮಾತು ಹೇಳಿದ್ದರು. ನನ್ನ ಇವತ್ತಿನ ಯಶಸ್ಸಿನಲ್ಲಿ ಆ ವ್ಯಕ್ತಿಯ ಪಾತ್ರ ತುಂಬಾ ದೊಡ್ಡದು. ಆದರೆ ಅವರ ಪರಿಶ್ರಮ ಕೆಲವೊಮ್ಮೆ ಜಗತ್ತಿನ ಕಣ್ಣಿಗೆ ಕಾಣುವುದೇ ಇಲ್ಲ ಎಂದು.

ಈ ವ್ಯಕ್ತಿ ಇರುವುದೇ ಹಾಗೆ. ಆತ ಭಾರತ ಕ್ರಿಕೆಟ್ ತಂಡದ ಬೆನ್ನೆಲುಬು. ಹೀಗಾಗಿ ಜಗತ್ತಿನ ಕಣ್ಣಿಗೆ ಕಾಣಿಸದೆ ಸದಾ ಆಟಗಾರರ ಬೆನ್ನ ಹಿಂದೆಯೇ ನಿಂತಿರುತ್ತಾನೆ. ಆತ ಟೀಮ್ ಇಂಡಿಯಾದ ಥ್ರೋಡೌನ್ ಸ್ಪೆಷಲಿಸ್ಟ್ ರಾಘವೇಂದ್ರ ಡ್ವಿಗಿ.

2011ರಲ್ಲಿ ಭಾರತ ತಂಡಕ್ಕೆ ಥ್ರೋಡೌನ್ ಸ್ಪೆಷಲಿಸ್ಟ್ ಆಗಿ ಸೇರಿಕೊಂಡ ರಘು, ಕಳೆದೊಂದು ದಶಕದಲ್ಲಿ ಭಾರತ ತಂಡದ ಅಭ್ಯಾಸದ ವೇಳೆ ಕನಿಷ್ಠ 10 ಲಕ್ಷ ಚೆಂಡುಗಳನ್ನು ಎಸೆದಿರಬಹುದು. ರಾಘವೇಂದ್ರನ ರಟ್ಟೆಯ ಬಲದಿಂದ ನುಗ್ಗಿ ಬರುವ ಆ ಎಸೆತಗಳನ್ನು ಎದುರಿಸಲು ಸಾಧಾರಣ ಧೈರ್ಯ ಸಾಲದು. 150 kph ವೇಗದಲ್ಲಿ ಬಂದಪ್ಪಳಿಸುವ ಮಿಂಚಿನ ವೇಗದ ಚೆಂಡುಗಳವು. Side arm ಎಂಬ ಸಾಧನ ರಘು ಕೈಯಲ್ಲಿದ್ದಾಗ ಇವನಷ್ಟು ವೇಗದಲ್ಲಿ ಚೆಂಡೆಸೆಯುವ ಮತ್ತೊಬ್ಬ ಥ್ರೋಡೌನ್ ಸ್ಪೆಷಲಿಸ್ಟ್ ಜಗತ್ತಿನಲ್ಲೇ ಇಲ್ಲ.

Advertisement

Leave a reply

Your email address will not be published. Required fields are marked *