ಬೆಳಗಾವಿ : ಮಹಾರಾಷ್ಟ್ರ, ಕರ್ನಾಟಕ ರಾಜ್ಯದ ಗಡಿ ಭಾಗದಲ್ಲಿ ಅಕ್ರಮವಾಗಿ ಮೀನಿನ ವಾಹನದಲ್ಲಿ ಗೋವಾ ಮದ್ಯ ಸಾಗಾಟ ಮಾಡುತ್ತಿದ್ದ ವಾಹನವನ್ನು ವಶಪಡಿಸಿಕೊಂಡು, 55.28 ಲಕ್ಷ ರೂ. ಮೌಲ್ಯದ ಮದ್ಯ ಹಾಗೂ ವಾಹನವನ್ನು ಜಪ್ತಿ ಮಾಡಲಾಗಿದೆ ಎಂದು ಅಬಕಾರಿ ಉಪ ಆಯುಕ್ತ ವೈ.ಮಂಜುನಾಥ್ ಹೇಳಿದರು.

ಸೋಮವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕಳೆದ ನ.14ರಂದು ರಾತ್ರಿ 11.50ರ ಸುಮಾರಿಗೆ ಬೆಳಗಾವಿ ತಾಲೂಕಿನ ಗಡಿ ಭಾಗದಲ್ಲಿರುವ ವೈಭವ ಹೋಟೆಲ್ ಮುಂಭಾಗದ ಬಾಚಿ ರಸ್ತೆಯಲ್ಲಿ ಅಬಕಾರಿ ಅಧಿಕಾರಿಗಳು ರಸ್ತೆ ಗಸ್ತು ನಡೆಸುತ್ತಿದ್ದರು.

ಈ ವೇಳೆ ಗೋವಾ ಕಡೆಯಿಂದ ಬರುತ್ತಿದ್ದ ಕೆಎ-20 ಎಎ-6449 ನೋಂದಣಿ ಸಂಖ್ಯೆಯ ಚಾಕಲೇಟ್ ಬಣ್ಣದ ಟಾಟಾ ವಾಹನವನ್ನು ಗಮನಿಸಿದ ಸಮವಸ್ತ್ರದಲ್ಲಿದ್ದ ಅಧಿಕಾರಿಗಳು ಹಾಗೂ ಸಿಬ್ಬಂದಿಯನ್ನು ದೂರದಿಂದಲೇ ಗಮನಿಸಿದ ವಾಹನದ ಚಾಲಕ, ಸ್ಥಳದಲ್ಲೇ ವಾಹನ ನಿಲ್ಲಿಸಿ ಪರಾರಿಯಾಗಿದ್ದಾನೆ.

ಬಳಿಕ ಅಧಿಕಾರಿಗಳು ವಾಹನದ ಹಿಂಬದಿಯ ಕ್ಯಾರಿಯರ್ ಬಾಗಿಲು ತೆರೆದು ಪರಿಶೀಲಿಸಿದಾಗ, ಮೀನು ಸಾಗಾಟಕ್ಕೆ ಬಳಸುವ ಪ್ಲಾಸ್ಟಿಕ್ ಟ್ರೇಗಳ ಕೆಳಗೆ ಅಕ್ರಮವಾಗಿ ಮದ್ಯದ ಬಾಕ್ಸ್‌ಗಳನ್ನು ಬಚ್ಚಿಟ್ಟಿರುವುದು ಪತ್ತೆಯಾಗಿತ್ತು ಎಂದರು.
ಪರಿಶೀಲನೆ ವೇಳೆ ಒಟ್ಟು 350 ಬಾಕ್ಸ್‌ಗಳಲ್ಲಿ 180 ಎಂಎಲ್ ಅಳತೆಯ ಬಿಗ್ ಬಾಸ್ ಬ್ರಾಂಡಿಯ 3,024 ಲೀಟರ್ ಗೋವಾ ಮದ್ಯ ಪತ್ತೆಯಾಗಿದೆ. ಅಕ್ರಮವಾಗಿ ಮಾರಾಟ ಮಾಡುವ ಉದ್ದೇಶದಿಂದ ಮದ್ಯ ಸಾಗಾಟ ಮಾಡಲಾಗುತ್ತಿತ್ತು ಎಂದರು.

ಜಪ್ತಿ ಮಾಡಲಾದ ಮದ್ಯದ ಮೌಲ್ಯ 35.28 ಲಕ್ಷ ರೂ. ಹಾಗೂ ವಾಹನದ ಮೌಲ್ಯ 20 ಲಕ್ಷ ರೂ. ಸೇರಿ ಒಟ್ಟು 55.28 ಲಕ್ಷ ರೂಮ ಮೌಲ್ಯದ ಸ್ವತ್ತು ವಶಪಡಿಸಿಕೊಳ್ಳಲಾಗಿದೆ. ವಾಹನದ ಮಾಲೀಕ ಹಾಗೂ ಪರಾರಿಯಾಗಿರುವ ಆರೋಪಿಯ ಪತ್ತೆಗಾಗಿ ತನಿಖೆ ಮುಂದುವರಿದಿದೆ ಎಂದರು.