VIDEO – ಮಕ್ಕಳ ಕಳ್ಳರೆಂಬ ಸುಳ್ಳು ವದಂತಿ ಹರಡಿದರೆ ಕಠಿಣ ಕ್ರಮ : ಎಸ್ಪಿ ಸಂಜೀವ್ ಪಾಟೀಲ್
ಬೆಳಗಾವಿ : ಜಿಲ್ಲೆಯಾದ್ಯಂತ ಮಕ್ಕಳ ಕಳ್ಳತನ ಕುರಿತು ಹರಡಿಸುತ್ತಿರುವ ಸುಳ್ಳು ಸಂಗತಿಗಳಿಗೆ ಕಡಿವಾಣ ಹಾಕಲು ಬೆಳಗಾವಿ ಪೊಲೀಸ್ ಇಲಾಖೆ ಮುಂದಾಗಿದೆ. ಹಳೆಯ ವೀಡಿಯೋ ಬಳಸಿಕೊಂಡು ಸೋಶಿಯಲ್ ಮೀಡಿಯಾದಲ್ಲಿ ಹರಡುವ ಕೆಲಸ ಮಾಡುವವರಿಗೆ ಎಸ್ಪಿ ಸಂಜೀವ್ ಪಾಟೀಲ್ ಎಚ್ಚರಿಕೆ ನೀಡಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ಮಕ್ಕಳ ಕಳ್ಳರಿದ್ದಾರೆ ಎಂಬ ವದಂತಿಗಳು ಹರಡುತ್ತಿದ್ದು ಯಾರೂ ಸಹ ಅದಕ್ಕೆ ಕಿವಿಗೊಡಬೇಡಿ. ಒಂದು ವೇಳೆ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದರೆ ಸಹಾಯವಾಣಿ ಸಂಖ್ಯೆ 112ಗೆ ಕರೆ ಮಾಡಿ ಮಾಹಿತಿ ನೀಡಿ ಎಂದು ಬೆಳಗಾವಿ ಪೊಲೀಸ್ ಇಲಾಖೆ ಸ್ಪಷ್ಟಪಡಿಸಿದೆ.
ಗೋಕಾಕ ತಾಲೂಕಿನಲ್ಲಿ ಮಕ್ಕಳ ಕಳ್ಳರು ಬಂದಿದ್ದಾರೆ ಎಂಬ ವದಂತಿ ಹರಡಿದ್ದು ಅದು ಸುಳ್ಳು. ಅನುಮಾನಸ್ಪದವಾಗಿ ತಿರುಗಾಡುತ್ತಿದ್ದ ನಾಗಾ ಸಾಧುಗಳನ್ನು ತಡೆದು ಸಾರ್ವಜನಿಕರು ಪ್ರಶ್ನಿಸಿದಾಗ ನಾಗಾಸಾಧುಗಳೇ ಸಮೀಪದ ಪೊಲೀಸ್ ಠಾಣೆಗೆ ಕರೆದೊಯ್ಯುವಂತೆ ತಿಳಿಸಿದ್ದಾರೆ. ಘಟಪ್ರಭಾ ಠಾಣೆ ಇನ್ಸ್‌ಪೆಕ್ಟರ್ ವಿಚಾರಿಸಿ ಆ ನಾಗಾಸಾಧುಗಳ ಐಡಿ ಹಾಗೂ ಇತರೆ ದಾಖಲೆ ಪರಿಶೀಲಿಸಿದಾಗ ಅವರು ಉತ್ತರ ಪ್ರದೇಶದ ಅಲಿಗಡ್ ಹಾಗೂ ಹತ್ರಾಸ್ ಜಿಲ್ಲೆಯವರು ಎಂದು ತಿಳಿದು ಬಂದಿದೆ.
ಈ ನಾಗಾಸಾಧುಗಳು ಪ್ರತಿ ಎರಡುಮೂರು ವರ್ಷಕ್ಕೊಮ್ಮೆ ನಮ್ಮ ಜಿಲ್ಲೆಯ ಮೂಲಕ ಪ್ರವಾಸ ಮಾಡಿ ರಾಮೇಶ್ವರಕ್ಕೆ ತೆರಳುತ್ತಾರೆ ಎಂಬುದು ಗೊತ್ತಾಗಿದೆ. ಬೆಳಗಾವಿ ಜಿಲ್ಲೆಯಲ್ಲಿ ಸಂಕೇಶ್ವರದ ಬಾಲಕನ ಅಪಹರಣ ಪ್ರಕರಣ ಬಳಿಕ ಯಾವುದೇ ಕಿಡ್ನಾಪ್ ಪ್ರಕರಣಗಳು ವರದಿ ಆಗಿಲ್ಲ. ಹೀಗಾಗಿ ಜನರು ಯಾರೂ ಸಹ ಗಾಬರಿಗೊಳ್ಳದೇ, ಕಾನೂನು ಕೈಗೆ ತಗೆದುಕೊಳ್ಳದೇ ಅನುಮಾನಸ್ಪದ ವ್ಯಕ್ತಿಗಳು ಕಂಡು ಬಂದ್ರೆ 112ಗೆ ಕರೆ ಮಾಡಿ ಮಾಹಿತಿ ನೀಡಲು ಮನವಿ ಮಾಡಿದ್ದಾರೆ.