ನಾಳೆ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ – ಯಾವೆಲ್ಲ ಸ್ಥಳದಲ್ಲಿ ನಡೆಯಲಿದೆ ಈ ಕಾರ್ಯ ?
ವಿಜಯಪುರ : ಶತಮಾನದ ಸಂತ ವಿಜಯಪುರ ಜ್ಞಾನ ಯೋಗಾಶ್ರಮದ ಶ್ರೀ ಸಿದ್ದೇಶ್ವರ ಶ್ರೀಗಳು ನಮ್ಮನ್ನ ಅಗಲಿ ಇಂದಿಗೆ ಆರು ದಿನಗಳಾಗಿವೆ. ನಾಳೆ ಜ.8 ರಂದು ಏಳು ದಿನಗಳ ಕಖೆಯುತ್ತಿದ್ದು ಭಾನುವಾರ ಶ್ರೀಗಳ ಅಸ್ಥಿ ವಿಸರ್ಜನೆ ನಡೆಯಲಿದ್ದು ಯಾವೆಲ್ಲ ಸ್ಥಳದಲ್ಲಿ ನಡೆಯಲಿದೆ ಎಂಬುದರ ಮಾಹಿತಿ ಇಲ್ಲಿದೆ.
ಕಳೆದ ಸೋಮವಾರ ಸಿದ್ದೇಶ್ವರ ಶ್ರೀಗಳು ಲಿಂಗೈಕ್ಯರಾದರು. ಇವರು ಹೇಳಿದಂತೆ ಅವರ ಅಂತಿಮ ಕ್ರಿಯೆಗಳು ನೆರವೇರಿದ್ದು ಯಾವುದೇ ಆಡಂಬರಕ್ಕೆ ಅವಕಾಶ ಮಾಡಿಕೊಟ್ಟಿಲ್ಲ. ಶ್ರೀಗಳ ಕೊನೆಯ ಆಸೆಯಂತೆ ಶರೀರವನ್ನು ಹೂಳದೆ ಅಗ್ನಿಸ್ಪರ್ಷ ಮಾಡಲಾಗಿದೆ. ಹಾಗೆಯೇ ಅವರ ಆಸೆಯಂತೆ ಅವರ ಅಸ್ಥಿಯನ್ನು ನದಿ, ಹಾಗೂ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ.
ಈಗಾಗಲೇ ಶ್ರೀಮಠದ ಕಿರಿಯ ಶ್ರೀಗಳು ಈ ಕುರಿತು ಸಂಪೂರ್ಣ ತಯಾರಿ ಮಾಡಿಕೊಂಡಿದ್ದು ನಾಳೆ ಅಸ್ಥಿ ಸಮರ್ಪಣಾ ಕಾರ್ಯ ನೆರವೇರಲಿದೆ. ಈ ವೇಳೆ ಪಾಲ್ಗೊಳ್ಳುವ ಭಕ್ತರು ತಮ್ಮ ಊಟ ಹಾಗೂ ವಾಹನ ವ್ಯವಸ್ಥೆ ತಾವೇ ಮಾಡಿಕೊಂಡು ಬರಬೇಕೆಂದು ಮನವಿ ಮಾಡಿಕೊಂಡಿದ್ದಾರೆ.
ಭಾನುವಾರ ಜ. 8 ರಂದು ವಿಜಯಪುರದ ಜ್ಞಾನ ಯೋಗಾಶ್ರಮದಿಂದ ಶ್ರೀಗಳ ಅಸ್ಥಿಯನ್ನು ತಗೆದುಕೊಂಡು ಮೊದಲು ಬಾಗಲಕೋಟೆ ಜಿಲ್ಲೆಯ ಬಸವಣ್ಣನವರು ಐಕ್ಯ ಹೊಂದಿರುವ ಕೂಡಲಸಂಗಮದಲ್ಲಿ ಅಸ್ಥಿ ಸಮರ್ಪಣಾ ಕಾರ್ಯ ನೆರವೇರಲಿದೆ. ಕೃಷ್ಣಾ ಹಾಗೂ ಮಲಪ್ರಭಾ ನದಿಗಳ ಸಂಗಮ ಈ ಜಾಗದಲ್ಲಿ ಆಗುತ್ತಿದ್ದು ಈ ಪವಿತ್ರ ಸಂಗಮದಲ್ಲಿ ಸಿದ್ದೇಶ್ವರ ಶ್ರೀಗಳ ಅಸ್ಥಿ ವಿಸರ್ಜನೆ ಕಾರ್ಯ ನೆರವೇರಲಿದೆ.
ಇದಾದ ನಂತರ ಅಸ್ಥಿಯೊಂದಿಗೆ ಗೋಕರ್ಣಕ್ಕೆ ತೆರಳಲಿದ್ದು ಅಲ್ಲಿನ ಸಮುದ್ರದಲ್ಲಿ ಅಸ್ಥಿ ವಿಸರ್ಜನೆ ನಡೆಯಲಿದೆ. ಶ್ರೀಗಳು ಬಯಸಿದಂತೆ ಅವರ ಅಸ್ಥಿಯನ್ನು ನದಿ ಹಾಗೂ ಸಮುದ್ರದಲ್ಲಿ ವಿಸರ್ಜನೆ ಮಾಡಲಾಗುತ್ತದೆ ಎಂದು ಜ್ಞಾನ ಯೋಗಾಶ್ರಮದ ಬಸವಲಿಂಗ ಸ್ವಾಮೀಜಿ ಮಾಹಿತಿ ನೀಡಿದ್ದಾರೆ.