ಸವದಿ, ಶೆಟ್ಟರ್ ಗೆ ಆಹ್ವಾನ ಕೊಟ್ಟ ಬಿಜೆಪಿ ; ರಿವರ್ಸ್ ಆಪರೇಶನ್ ಮುಂದಾದ ಕಮಲ ಪಡೆ
ಬೆಂಗಳೂರು : ಕಳೆದ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದ ಅನೇಕ ಮುಖಂಡರ ಪೈಕಿ ಇಡೀ ರಾಜ್ಯದ ಗಮನಸೆಳೆದಿದ್ದು ಮಾತ್ರ ಇಬ್ಬರು ದಿಗ್ಗಜರು. ಮಾಜಿ ಸಿಎಂ ಜಗದೀಶ್ ಶೆಟ್ಟರ್ ಹಾಗೂ ಮಾಜಿ ಡಿಸಿಎಂ ಲಕ್ಷ್ಮಣ ಸವದಿ.
ಹೌದು ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಹೈಕಮಾಂಡ್ ಸವದಿ ಮತ್ತು ಶೆಟ್ಟರ್ ಇಬ್ಬರಿಗೂ ಟಿಕೆಟ್ ನಿರಾಕರಣೆ ಮಾಡಿತ್ತು. ಇದರಿಂದ ಬೇಸತ್ತ ಈ ಇಬ್ಬರು ನಾಯಕರು ಕಮಲ ತೊರೆದು ಕೈ ತೆಕ್ಕೆಗೆ ಜಾರಿದ್ದರು. ಇದಾದ ನಂತರದಲ್ಲಿ ನಡೆದ ಚುನಾವಣೆಯಲ್ಲಿ ಅಥಣಿಯಲ್ಲಿ ಸವದಿ ಗೆದ್ದರೆ ಅತ್ತ ಶೆಟ್ಟರ್ ಸೋತು ಪರಿಷತ್ ಸದಸ್ಯರಾಗಿದ್ದಾರೆ.
ಈ ಎಲ್ಲಾ ಘಟನೆ ನಡೆದು ಸಧ್ಯ ಕಾಂಗ್ರೆಸ್ ಸರ್ಕಾರ ಅಸ್ತಿತ್ವಕ್ಕೆ ಬಂದಾಗಿದ್ದರು, ಇನ್ನೂ ಆಪರೇಷನ್ ಗಲಾಟೆ ಮುಗಿದಿಲ್ಲ. ಮುಂಬರುವ ಲೋಕಸಭಾ ಚುನಾವಣಾ ದೃಷ್ಟಿಯಿಂದ ಕಾಂಗ್ರೆಸ್ ಈಗಾಗಲೇ ಬಿಜೆಪಿ ನಾಯಕರನ್ನು ಸೆಳೆಯಲು ಮುಂದಾಗಿದೆ. ಜತೆಗೆ ಅನೇಕ ಶಾಸಕರು, ಮಾಜಿ ಶಾಸರಕನ್ನು ಕರೆತರಲು ಡಿಸಿಎಂ ಡಿಕೆಶಿ ಪ್ರಯತ್ನ ನಡೆಸುವ ಬೆನ್ನಲ್ಲೇ ಬಿಜೆಪಿ ತಂತ್ರ ಹೆಣೆಯುತ್ತಿದೆ.
ಹೌದು ಈಗಾಗಲೇ ಪಕ್ಷ ಬಿಟ್ಟುಹೋಗಿರುವ ಲಕ್ಷ್ಮಣ ಸವದಿ ಮತ್ತು ಜಗದೀಶ್ ಶೆಟ್ಟರ್ ಇಬ್ಬರನ್ನೂ ಕರೆತರಲು ಬಿಜೆಪಿ ರೀವರ್ಸ ಆಪರೇಶನ್ ಗೆ ಮುಂದಾಗಿದೆಯಾ ಎಂಬ ಮಾತು ಎಲ್ಲೆಡೆ ಕೇಳಿಬರುತ್ತಿವೆ. ಹೌದು. ಈ ಇಬ್ಬರಿಗೂ ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಭಹಿರಂಗವಾಗಿ ಆಹ್ವಾನ ನೀಡುವ ಮೂಲಕ ಹೊಸ ಗಾಳ ಬೀಸಿದ್ದಾರೆ.
ಕಾಂಗ್ರೆಸ್ ಅಸ್ತ್ರಕ್ಕೆ ರಿವರ್ಸ್ ಅಸ್ತ್ರ ಹೆಣೆದಿರುವ ಬಿಜೆಪಿ ಸದ್ಯ ಪಕ್ಷದಿಂದ ಹೊರನಡೆದಿರುವ ಸವದಿ ಹಾಗೂ ಶೆಟ್ಟರ್ ಇಬ್ಬರನ್ನೂ ಕರೆತರುವ ಸಾಹಸಕ್ಕೆ ಮುಂದಾಗಿದೆ ಎಂದು ಹೇಳಲಾಗುತ್ತಿದೆ. ಇದರಿಂದ ಡಿಕೆಶಿ ಆಪರೇಶನ್ ವೇಗಕ್ಕೆ ತಡೆ ಒಡ್ಡಲು ರೀವಸ್೯ ಅಸ್ತ್ರಕ್ಕೆ ಬಿಜೆಪಿ ಹೈಕಮಾಂಡ್ ಮುಂದಾಯ್ತಾ ಎಂಬ ಮಾತು ಕೇಳಿಬರುತ್ತಿವೆ.
ಮುಂಬರುವ ಲೋಕಸಭಾ ಚುನಾವಣೆ ಬಿಜೆಪಿ ಪಾಲಿಗೆ ತುಂಬಾ ಮಹತ್ವದ್ದಾಗಿದೆ. ಜೊತೆಗೆ ನರೇಂದ್ರ ಮೋದಿಯವರು ಮೂರನೇ ಬಾರಿಗೆ ಪ್ರಧಾನಿ ಆಗಬೇಕಾದರೆ ಪ್ರತಿಯೊಂದು ಲೋಕಸಭಾ ಕ್ಷೇತ್ರ ಗೆಲ್ಲುವ ಅನಿವಾರ್ಯ ಕೂಡಾ ಕರ್ನಾಟಕದ ಮೇಲಿದ್ದು, ಈ ಎಲ್ಲಾ ಕಾರಣಕ್ಕೆ ಬಿಜೆಪಿ ತನ್ನ ಹಳೆ ನಾಯಕರನ್ನು ಸೆಳೆಯುವ ಪ್ರಯತ್ನ ಮಾಡುತ್ತಿದೆ ಎಂದು ಹೇಳಲಾಗುತ್ತಿದೆ.

