Video – ಜಂಪ್ ಹೊಡೆಯುವವರಿಗೆ ಜನ ಬುದ್ದಿ ಕಲಿಸುತ್ತಾರೆ ; ಸವದಿ ವಿರುದ್ಧ ಗುಡುಗಿದ ಸಾಹುಕಾರ್
ಅಥಣಿ : ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಗೆ ಅಥಣಿಯಲ್ಲಿ ಲೀಡ್ ಕೊಟ್ಟಿದ್ದು ಮತದಾರರು. ಜಂಪ್ ಹೊಡೆಯುವ ಜನರಿಗೆ ಮುಂದಿನ ದಿನ ಜನರೇ ತಕ್ಕ ಪಾಠ ಕಲಿಸುತ್ತಾರೆ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ರಮೇಶ್ ಜಾರಕಿಹೊಳಿ ಟಾಂಗ್ ನೀಡಿದರು.
ಅಥಣಿ ಪಟ್ಟಣದಲ್ಲಿ ಭಾನುವಾರ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಲೋಕಸಭಾ ಚುನಾವಣೆ ಫಲಿತಾಂಶದ ನಂತರ ಎರಡು ರಾಷ್ಟ್ರೀಯ ಪಕ್ಷಗಳು ಆತ್ಮಾವಲೋಕನ ಮಾಡಿಕೊಳ್ಳಬೇಕು. ಅದರಲ್ಲೂ ವಿಶೇಷವಾಗಿ ಅಥಣಿ ಬಗ್ಗೆ ತಿಳಿದುಕೊಳ್ಳಬೇಕು. ಕೆಲವರು ನಾವು ಆಡಿದ್ದೇ ಆಟ ಎಂದು ತಿಳಿದುಕೊಂಡಿದ್ದಾರೆ.
ಮಹೇಶ್ ಕುಮಠಳ್ಳಿ ಅಥಣಿ ಕ್ಷೇತ್ರದಲ್ಲಿ ಹಲವು ಅಭಿವೃದ್ಧಿ ಕಾರ್ಯಗಳನ್ನು ಮಾಡಿದ್ದಾರೆ. ಅಥಣಿ ಜನರು ಬುದ್ಧಿವಂತರಿದ್ದಾರೆ, ಮುಂದಿನ ದಿನಗಳಲ್ಲಿ ಅವರು ಸರಿಯಾದ ನಿರ್ಧಾರ ತೆಗೆದುಕೊಳ್ಳುತ್ತಾರೆ ಎಂದರು.
ಲೋಕಸಭಾ ಚುನಾವಣೆಯಲ್ಲಿ ಜನರು ಬಿಜೆಪಿ ಮೇಲೆ ವಿಶ್ವಾಸವಿಟ್ಟು ಮತ ಹಾಕಿದ್ದಕ್ಕೆ ಪ್ರತೀಕಾರವಾಗಿ ಕಾಂಗ್ರೆಸ್ ಸರ್ಕಾರ ಪೆಟ್ರೋಲ್, ಡೀಸೆಲ್ ಬೆಲೆ ಏರಿಕೆ ಮಾಡಿದೆ ಎಂದು ಗೋಕಾಕ ಶಾಸಕ ರಮೇಶ ಜಾರಕಿಹೊಳಿ ಆರೋಪಿಸಿದರು.
ರಾಜ್ಯದಲ್ಲಿನ ಜನರು ಬರಗಾಲದಿಂದ ತತ್ತರಿಸಿ ಕಷ್ಟದಲ್ಲಿರುವಾಗ ಬೆಲೆ ಏರಿಕೆ ಮಾಡಬಾರದಿತ್ತು. ಸರ್ಕಾರ ಈ ಬೆಲೆ ಏರಿಕೆ ನಿರ್ಧಾರವನ್ನು ಹಿಂಪಡೆಯಬೇಕು ಎಂದು ಆಗ್ರಹಿಸುತ್ತೇವೆ ಎಂದರು.
ಸರ್ಕಾರ ಒಂದು ಕೈಯಿಂದ ಕೊಡುವುದು, ಇನ್ನೊಂದು ಕೈಯಿಂದ ಕಿತ್ತುಕೊಳ್ಳುವುದನ್ನು ಮಾಡುತ್ತಿದೆ. ಸಾಮಾನ್ಯಜನರ ಮೇಲೆ ಆರ್ಥಿಕ ಹೊರೆ ಸರಿಯಲ್ಲ. ಈ ಬಗ್ಗೆ ಮುಖ್ಯಮಂತ್ರಿಗಳು ಸರಿಯಾದ ನಿರ್ಧಾರ ಕೈಗೊಳ್ಳಬೇಕು ಎಂದು ಹೇಳಿದರು.
ಅಥಣಿಯಲ್ಲಿ ಮಾಜಿ ಶಾಸಕರೊಂದಿಗೆ ಸಭೆ ನಡೆಸಿರುವ ವಿಚಾರವಾಗಿ ಪ್ರತಿಕ್ರಿಯಿಸಿ, ಮುಂಬರುವ ಜಿಲ್ಲಾ ಪಂಚಾಯತ, ತಾಲೂಕು ಪಂಚಾಯತ ಚುನಾವಣೆಗೆ ತಳಮಟ್ಟದಿಂದ ಪಕ್ಷ ಕಟ್ಟಿ ಗೆಲ್ಲಿಸಲು ಒತ್ತುಕೊಟ್ಟಿದ್ದೇವೆ. ಬೇರೆ ವಿಚಾರಗಳನ್ನು ಚರ್ಚೆ ಮಾಡಿಲ್ಲ ಎಂದರು.
ಈ ವೇಳೆ ಮಾಜಿ ಶಾಸಕ ಮಹೇಶ್ ಕುಮಟಳ್ಳಿ, ಶ್ರೀಮಂತ ಪಾಟೀಲ ಸೇರಿದಂತೆ ಬಿಜೆಪಿ ಮುಖಂಡರು ಉಪಚುತರಿದ್ದರು.