ಅಕ್ಟೋಬರ್ 31 ರಂದು ರಾಮದುರ್ಗದಲ್ಲಿ ಬೃಹತ್ ಉದ್ಯೋಗ ಮೇಳ
ಬೆಳಗಾವಿ : ಸೋದರಿ ನಿವೇದಿತಾ ಹಾಗೂ ಸರ್ದಾರ್ ವಲ್ಲಭಭಾಯಿ ಪಟೇಲ್ ಜಯಂತಿ ನಿಮಿತ್ತವಾಗಿ ಅ.31 ರಂದು ರಾಮದುರ್ಗ ತಾಲೂಕಿನಲ್ಲಿ ಜಿ ಎಂ ಇಂಡಸ್ಟ್ರೀಸ್ ಕಡಕೋಳ ಬೃಹತ್ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದು ಜಿ.ಎಂ. ಇಂಡಸ್ಟ್ರೀಸ್ ಅಧ್ಯಕ್ಷೆ ಹಾಗೂ ಬಿಜೆಪಿ ಮಹಿಳಾ ಮೋರ್ಚಾ ಬೆಳಗಾವಿ ಗ್ರಾಮಾಂತರ ಜಿಲ್ಲಾ ಅಧ್ಯಕ್ಷೆ ಡಾ. ರೇಖಾ ಚಿನ್ನಾಕಟ್ಟಿ ಹೇಳಿದರು.
ಗುರುವಾರ ನಗರದಲ್ಲಿ ಕರೆಯಲಾದ ಸುದ್ದಿಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದರು. ರಾಮದುರ್ಗದ ಗೊಡಚಿ ವೀರಭದ್ರೇಶ್ವರ ದೇವಸ್ಥಾನದ ಹತ್ತಿರ ಇರುವ ಶಿವಾನುಭವ ಕಲ್ಯಾಣ ಮಂಟಪದಲ್ಲಿ ಬೆಳಗ್ಗೆ 9 ಗಂಟೆಯಿಂದ ಸಂಜೆ 4ರವರೆಗೆ ಇದೇ ಮೊದಲ ಬಾರಿಗೆ ರಾಮದುರ್ಗದಲ್ಲಿ ಬಹೃತ್ ಉದ್ಯೋಗ ಮೇಳ ನಡೆಯಲಿದೆ ಎಂದರು.
ಇತ್ತೀಚಿನ ದಿನಗಳಲ್ಲಿ ಸಾಕಷ್ಟು ವಿದ್ಯಾರ್ಥಿಗಳು ಶಿಕ್ಷಣ ಪಡೆದು ಉದ್ಯೋಗ ಇಲ್ಲದೆ ಮನೆಯಲ್ಲಿ ಇದ್ದಾರೆ. ಆ ಯುವಕರನ್ನು ಗುರುತಿಸಿ ಅವರಿಗೆ ಉದ್ಯೋಗಾವಕಾಶ ಕಲ್ಪಿಸುವ ನಿಟ್ಟಿನಲ್ಲಿ ಉದ್ಯೋಗ ಮೇಳ ಆಯೋಜಿಸಲಾಗಿದೆ ಎಂದರು.
7ನೇ ತರಗತಿಯಿಂದ ಸ್ನಾತಕೋತ್ತರ ಪದವಿ ಪಡೆದಿರುವ ಯುವಕ, ಯುವತಿಯರು ಈ ಉದ್ಯೋಗ ಮೇಳದಲ್ಲಿ ಭಾಗವಹಿಸಬಹುದಾಗಿದೆ. ರಾಜ್ಯದ ಪ್ರಮುಖ 50ಕ್ಕೂ ಅಧಿಕ ಸಂಸ್ಥೆಗಳು ಈ ಉದ್ಯೋಗ ಮೇಳದಲ್ಲಿ ಪಾಲ್ಗೊಳ್ಳಲಿವೆ. ಈ ಮೇಳದಲ್ಲಿ ಭಾಗ ವಹಿಸುವ ಅಭ್ಯರ್ಥಿಗಳು ತಮ್ಮ ಶೈಕ್ಷಣಿಕ ದಾಖಲೆಗಳ ಜೆರಾಕ್ಸ್ ಪ್ರತಿ ಹಾಗೂ ಪಾಸ್ ಫೋರ್ಟ್ ಸೈಜ್ ಫೋಟೋ ಜತೆಗೆ ಆಧಾರ್ ಕಾಡ್೯ ನೊಂದಿಗೆ ನೇರ ಸಂದರ್ಶನದಲ್ಲಿ ಹಾಜರಾಗಬೇಕೆಂದರು.
ಯುವಕರಿಗೆ ಉದ್ಯೋಗಾವಕಾಶ ಹಾಗೂ ಸ್ವಾವಲಂಬಿ ಜೀವನ ನಡೆಸುವ ಉದ್ದೇಶದಿಂದ ಈ ಉದ್ಯೋಗ ಮೇಳವನ್ನು ಆಯೋಜಿಸಲಾಗಿದ್ದು, ಏಳನೇ ತರಗತಿಯಿಂದ ಪಿಯುಸಿ, ಡಿಗ್ರಿ, ಪಿಜಿ, ಬಿಇ, ಇಂಜನಿಯರಿಂಗ್, ಡಿಪ್ಲೊಮಾ, ಬಿಎಸ್ಸಿ, ಫಾರ್ಮಾಸಿ, ಬಿಸಿಎ, ಬಿಬಿಎ, ಎಂಬಿಎ, ಎಂಸಿಎ ವಿದ್ಯಾರ್ಥಿಗಳಿಗೆ ಸುವರ್ಣಾವಕಾಶವಿದ್ದು ಇದರ ಲಾಭವನ್ನು ಪಡೆದುಕೊಳ್ಳಬೇಕೆಂದು ಕರೆ ನೀಡಿದರು. ಈ ಸಂದರ್ಭದಲ್ಲಿ ವಿಠ್ಠಲ್ ನಾಯಕ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.