ಇವರು ಶಿಕ್ಷಣ ಪ್ರೇಮಿ ಸಿಇಒ ; ರಾಹುಲ್ ಶಿಂಧೆ ಅವರ ಕಾರ್ಯಕ್ಕೆ ಎಲ್ಲೆಡೆ ಶ್ಲಾಘನೆ
ಬೆಳಗಾವಿ : ವಿದ್ಯಾರ್ಥಿಗಳಲ್ಲಿ ಸ್ಪರ್ಧಾತ್ಮಕ ಮನೋಭಾವ ಮೂಡಿಸಲು ಜಿಲ್ಲಾ ಪಂಚಾಯತ್ ವತಿಯಿಂದ ಜಿಲ್ಲೆಯಾದ್ಯಂತ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಹಿನ್ನಲೆಯಲ್ಲಿ ಶನಿವಾರ ರಾಮತೀರ್ಥ ನಗರದ ಕರ್ನಾಟಕ ಪಬ್ಲಿಕ್ ಶಾಲೆ ಮತ್ತು ವಂಟಮೂರಿಯ ಸರಕಾರಿ ಪ್ರೌಢ ಶಾಲೆ ಪರೀಕ್ಷಾ ಕೇಂದ್ರಗಳಿಗೆ ಜಿಪಂ ಸಿಇಒ ರಾಹುಲ್ ಶಿಂಧೆ ಭೇಟಿನೀದರು.
ಬೆಳಗಾವಿ ಹಾಗೂ ಚಿಕ್ಕೋಡಿ ಶೈಕ್ಷಣಿಕ ಜಿಲ್ಲೆಯಲ್ಲಿ ಏಕಕಾಲದಲ್ಲಿ ತಾಲೂಕ ಮಟ್ಟದಲ್ಲಿ ಪರೀಕ್ಷೆಗಳು ನಡೆಯುತ್ತಿವೆ. ಸ್ಪರ್ಧಾತ್ಮಕ ಪರೀಕ್ಷೆ ಕುರಿತು ವಿದ್ಯಾರ್ಥಿ ದೆಸೆಯಲ್ಲಿ ಮಕ್ಕಳಿಗೆ ಮಾಹಿತಿ ನೀಡುವ ವಿಭಿನ್ನ ಕಾರ್ಯಕ್ರಮವನ್ನು ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಅವರ ಮಾರ್ಗದರ್ಶನದಲ್ಲಿ ನಡೆಯುತ್ತಿದೆ. ಸಧ್ಯ ಜಿಲ್ಲೆಯ 9 ಮತ್ತು ಹತ್ತನೇ ತರಗತಿ ಶಾಲಾ ಮಕ್ಕಳು ಪರೀಕ್ಷೆಯಲ್ಲಿ ಭಾಗವಹಿಸಿದ್ದಾರೆ.
ಕರ್ನಾಟಕ ಪಬ್ಲಿಕ್ ಶಾಲೆ ರಾಮತೀರ್ಥನಗರ ಹಾಗೂ ಸರಕಾರಿ ಪ್ರೌಢ ಶಾಲೆ ವಂಟಮೂರಿ ಶಾಲೆಗಳಲ್ಲಿ ಟ್ಯಾಲೆಂಟ್ ಸರ್ಚ್ ಪರೀಕ್ಷೆ ಬರೆಯುತ್ತಿದ್ದ ಮಕ್ಕಳೊಂದಿಗೆ ಸಿಇಒ ರಾಹುಲ್ ಶಿಂಧೆ ಕೆಲಹೊತ್ತು ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮಾತನಾಡಿದ ವಿದ್ಯಾರ್ಥಿಗಳು ಟ್ಯಾಲೆಂಟ್ ಸರ್ಚ್ ಪರೀಕ್ಷೆಯ ಕುರಿತು ಹರ್ಷ ವ್ಯಕ್ತಪಡಿಸಿದರು. ವರ್ತಮಾನದಲ್ಲಿ ಸ್ಪರ್ಧಾತ್ಮಕ ಪರೀಕ್ಷೆ ಎದುರಿಸಲು ಇದು ಸಹಕಾರಿ ಆಗುತ್ತದೆ ಎಂದು ಹೇಳಿಕೊಂಡರು.
ವಿದ್ಯಾರ್ಥಿಗಳಿಗೆ 9ನೇ ತರಗತಿಗಳಿಂದಲೇ ಈ ಪರೀಕ್ಷೆಗಳನ್ನು ನಡೆಸುವ ಮೂಲಕ ಅವರು ಮುಂಬರುವ ಸ್ಪರ್ಧಾತ್ಮಕ ಪರೀಕ್ಷೆಗಳನ್ನು ಎದುರಿಸುವ ಆತ್ಮಸ್ಥೈರ್ಯವು ಇನ್ನಷ್ಟು ಗಟ್ಟಿಯಾಗುವಂತೆ ಮಾಡಲು ಈ ಪರೀಕ್ಷೆ ಅತ್ಯಂತ ಸೂಕ್ತವಾಗಿದೆ ಎಂಬ ಅಭಿಪ್ರಾಯವನ್ನು ಎಲ್ಲ ಶಿಕ್ಷಕರು ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಅಧಿಕಾರಿಗಳಾದ ಲೀಲಾವತಿ ಹಿರೇಮಠ, ಬಸವರಾಜ್ ನಾಲವತ್ವಾಡ, ಆಂಜನೇಯ ಆರ್,ಕೆ, ರವಿ ಭಜಂತ್ರಿ ಸೇರಿದಂತೆ ಅನೇಕರು ಉಪಸ್ಥಿತರಿದ್ದರು.
ವಿದ್ಯಾರ್ಥಿಗಳ ಭವಿಷ್ಯಕ್ಕೆ ಬೆಳಕಾದ ಸಿಇಟಿ – ಸಕ್ಷಮ್ ಯೋಜನೆ
ಜಿಲ್ಲಾ ಪಂಚಾಯತಿ ಸಿಇಒ ರಾಹುಲ್ ಶಿಂಧೆ ಅವರ ಪ್ರಯತ್ನದ ಫಲವಾಗಿ ಜಿಲ್ಲೆಯ ವಿದ್ಯಾರ್ಥಿಗಳ ಬಾಳಲ್ಲಿ ಹೊಸ ಬೆಳಕು ಮೂಡಿದೆ. ಹೊಸ ಹೊಸ ಕಾರ್ಯಕ್ರಮಗಳ ಮೂಲಕ ಗ್ರಾಮೀಣ ಭಾಗದ ಬಡ ವಿದ್ಯಾರ್ಥಿಗಳಿಗೆ ಸಹಕಾರಿಯಾಗುವ ಯೋಜನೆ ರೂಪಿಸಿದ್ದು ಮತ್ತೊಂದು ವಿಶೇಷ.
ಜಿಲ್ಲಾ ಪಂಚಾಯತಿ ಹಾಗೂ ಪದವಿ ಪೂರ್ವ ಶಿಕ್ಷಣ ಇಲಾಖೆಯ ಸಹಯೋಗದೊಂದಿಗೆ ಸಿಇಟಿ - ಸಕ್ಷಮ ವಿನೂತನ ಕಾರ್ಯಕ್ರಮವನ್ನು ಅನುಷ್ಠಾನಗೊಳಿಸಲಾಗಿದೆ. ಜಿಲ್ಲೆಯ ಎಲ್ಲ ಸರಕಾರಿ ವಿಜ್ಞಾನ ಪದವಿ ಪೂರ್ವ ಕಾಲೇಜುಗಳಲ್ಲಿ ಕಲಿಯುತ್ತಿರುವ ಬಡ ಕುಟುಂಬಗಳ ಹಾಗೂ ಗ್ರಾಮೀಣ ಪ್ರದೇಶಗಳ ಸಾವಿರಾರು ವಿದ್ಯಾರ್ಥಿಗಳನ್ನು ಸಿ.ಇ.ಟಿ ಎದುರಿಸಲು ಸಕ್ಷಮ ಗೊಳಿಸುವ ನಿಟ್ಟಿನಲ್ಲಿ ಹೊಸ ಪ್ರಯತ್ನ ಪ್ರಾರಂಭವಾಗಿದೆ.
ಸರಕಾರಿ ವಿಜ್ಞಾನ ಪಿಯು ಕಾಲೇಜುಗಳ ಪ್ರಥಮ ಪಿಯುಸಿ ವಿದ್ಯಾರ್ಥಿಗಳಿಗೆ ಪ್ರತಿ ತಿಂಗಳು ಎರಡನೇ ಶನಿವಾರ ಹಾಗೂ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳಿಗೆ ನಾಲ್ಕನೇ ಶನಿವಾರ ಸಿದ್ಧತಾ ಪರೀಕ್ಷೆಗಳನ್ನು ನಡೆಸುವ ಮೂಲಕ ಸಿಇಟಿ-ನೀಟ್ ಪರೀಕ್ಷೆಗಳಿಗೆ ಅವರನ್ನು ಸಜ್ಜುಗೊಳಿಸುವುದು ಸಿಇಟಿ-ಸಕ್ಷಮ್ ಕಾರ್ಯಕ್ರಮವಾಗಿದೆ.