ಸಂಸದ ಕಾಗೇರಿ ಮನವಿಗೆ ತಕ್ಷಣ ಸ್ಪಂದಿಸಿದ ರೈಲ್ವೆ ಸಚಿವರು ; ಫಂಡರಪುರಕ್ಕೆ 4 ದಿನ ವಿಶೇಷ ರೈಲು
ನವದೆಹಲಿ : ಬೆಂಗಳೂರಿನಿಂದ ಫಂಡರಾಪುರಕ್ಕೆ 4 ದಿನ ವಿಶೇಷ ರೈಲು ಪ್ರಯಾಣಿಸಲಿದೆ. ಉತ್ತರ ಕನ್ನಡ ಲೋಕಸಭಾ ಸದಸ್ಯ ವಿಶ್ವೇಶ್ವರ ಹೆಗಡೆ ಕಾಗೇರಿ ಮಾಡಿದ ಮನವಿಗೆ ಸ್ಪಂದಿಸಿದ ರೈಲ್ವೆ ಇಲಾಖೆ ಜೂನ್ 26, 28, 29 ಮತ್ತು 30ರಂದು ಬೆಂಗಳೂರಿನಿಂದ ಫಂಡರಾಪುರಕ್ಕೆ ವಿಶೇಷ ರೈಲು ಓಡಿಸಲಿದೆ.
ವಾರಕರಿ ಸಂಪ್ರದಾಯದವರು ಫಂದರಾಪುರ ವಾರಿ ಆಚರಣೆ ಹಿನ್ನೆಲೆಯಲ್ಲಿ ಫಂಡರಾಪುರಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಭೇಟಿ ನೀಡುವ ಹಿನ್ನೆಲೆಯಲ್ಲಿ ಯಶವಂತಪುರ -ಫಂಡರಾಪುರ ಮಧ್ಯೆ ಜೂನ್ 25ರಿಂದ ಜುಲೈ 30ರ ವರೆಗೆ ಪ್ರತಿ ನಿತ್ಯ ಸಂಚರಿಸುವಂತೆ ಮಾಡಬೇಕೆಂದು ವಿಶ್ವೇಶ್ವರ ಹೆಗಡೆ ಕಾಗೇರಿ ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರನ್ನು ಮಂಗಳವಾರ ನವದೆಹಲಿಯಲ್ಲಿ ಭೇಟಿ ಮಾಡಿ ಮನವಿ ಮಾಡಿದ್ದರು.
ಜೂನ್ 25ರಿಂದ ಜುಲೈ 30ರ ವರೆಗೆ ರೈಲು ಪ್ರತಿ ದಿನ ಚಲಿಸಿದರೆ ಅಪಾರ ಸಂಖ್ಯೆಯ ಯಾತ್ರಾರ್ಥಿಗಳಿಗೆ ಹೆಚ್ಚಿನ ಪ್ರಯೋಜನವಾಗುತ್ತದೆ. ಆದ್ದರಿಂದ ಈ ಮನವಿಯನ್ನು ಪರಿಗಣಿಸಿ ಯಶವಂತಪುರ ಎಕ್ಸ್‌ಪ್ರೆಸ್ ರೈಲು ಸೇವೆಯನ್ನು ನಿತ್ಯ ನೀಡಲು ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಬೇಕೆಂದು ಅವರು ವಿನಂತಿಸಿದ್ದರು.
ತಕ್ಷಣ ಸ್ಪಂದಿಸಿದ ಸಚಿವ ಅಶ್ವಿನಿ ವೈಷ್ಣವ್ ಅವರು, 4 ದಿನ ವಿಶೇಷ ರೈಲು ಓಡಿಸಲು ಆದೇಶಿಸಿದರು. ಮಂಗಳವಾರ ಸಂಜೆಯ ಹೊತ್ತಿಗೆ ಹುಬ್ಬಳ್ಳಿ ರೈಲ್ವೆ ಕಚೇರಿಯಿಂದ ಈ ಕುರಿತು ಆದೇಶ ಹೊರಬಿದ್ದಿದೆ. ಜೂನ್ 26, 28, 29 ಮತ್ತು 30ರಂದು ಸಂಜೆ 5.30ಕ್ಕೆ ಬೆಂಗಳೂರಿನಿಂದ ಹೊರಡಲಿರುವ ರೈಲು ಮರುದಿನ ಬೆಳಗ್ಗೆ 11.35ಕ್ಕೆ ಫಂಡರಾಪುರ ತಲುಪಲಿದೆ.
ಹಾಗೆಯೇ, ಜೂನ್ 27, 29, 30 ಮತ್ತು ಜುಲೈ 1ರಂದು ಸಂಜೆ 6.30ಕ್ಕೆ ಫಂಡರಾಪುರದಿಂದ ಹೊರಟು ಮರುದಿನ ಬೆಳಗ್ಗೆ 11.30ಕ್ಕೆ ಬೆಂಗಳೂರು ತಲುಪಲಿದೆ.
ತಮ್ಮ ಮನವಿಗೆ ತಕ್ಷಣ ಸ್ಪಂದಿಸಿದ ಕೇಂದ್ರ ರೈಲ್ವೆ ಸಚಿವರಿಗೆ ಫಂಡರಾಪುರ ಭಕ್ತರ ಪರವಾಗಿ ವಿಶ್ವೇಶ್ವರ ಹೆಗಡೆ ಕಾಗೇರಿ ಧನ್ಯವಾದ ಸಲ್ಲಿಸಿದ್ದಾರೆ.