
ಯುವಕರಿಗೆ ಬದುಕಿನ ಪಾಠ ಹೇಳಿದ ಡಿಸಿಪಿ ಪಿ.ವಿ. ಸ್ನೇಹಾ

ಬೆಳಗಾವಿ : ಮಾದಕ ವಸ್ತುಗಳ ಮಾರಾಟ ಜಾಲ ಪತ್ತೆ ಮಾಡುವುದಕ್ಕಿಂತ ಹೆಚ್ಚಾಗಿ ಯುವ ಜನರಲ್ಲಿ ಮಾದಕ ವಸ್ತುಗಳ ಬಳಕೆಯಿಂದ ಬದುಕಿನ ಮೇಲೆ ಆಗುವ ದುಷ್ಪರಿಣಾಮಗಳ ಅರಿವು ಪ್ರತಿಯೊಬ್ಬರಿಗೂ ಇರಬೇಕು.
ಪೋಷಕರು ಮಕ್ಕಳು ಮಾಡಿದ ತಪ್ಪಿಗೆ ಸಮಾಜದಲ್ಲಿ ತಲೆತಗ್ಗಿಸುವ ರೀತಿ ಬರದಂತೆ ಯುವಕರು ಬದುಕು ಸಾಗಿಸಬೇಕು ಎಂದು ಬೆಳಗಾವಿ ನಗರ ಅಪರಾಧ ಹಾಗೂ ಸಂಚಾರ ವಿಭಾಗದ ಡಿಸಿಪಿ ಪಿ.ವಿ ಸ್ನೇಹಾ ಅಭಿಪ್ರಾಯಪಟ್ಟರು.
ಬುಧವಾರ ನಗರದ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದಲ್ಲಿ ಹಮ್ಮಿಕೊಂಡಿದ್ದ ವಿಶ್ವ ಮಾದಕದ್ರವ್ಯ ವಸ್ತು ವಿರೋಧಿ ದಿನದ ಅಂಗವಾಗಿ ಮಾದಕ ವಸ್ತುಗಳ ಬಳಕೆ ಹಾಗೂ ಸೇವನೆ ವಿರೋಧಿ ಅರಿವು ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದರು.
ಮಾದಕ ದ್ರವ್ಯಗಳ ಸೇವನೆಯಿಂದ ಇಂದಿನ ಯುವ ಜನರ ಭವ್ಯ ಭವಿಷ್ಯ ನಾಶವಾಗುವುದರ ಜೊತೆಗೆ ತಂದೆ ತಾಯಿಗಳು ನಿಮ್ಮ ಮೇಲೆ ಇಟ್ಟಿರುವ ಕನಸುಗಳು ನುಚ್ಚು ನೂರಾಗಿ ಸಮಾಜದಲ್ಲಿ ಅವಮಾನಕ್ಕಿಡಾಗುತ್ತಾರೆ. ಬದುಕು ಎನ್ನುವುದು ಸೋಲು, ಗೆಲವು ಹತಾಶೆ ಸಂತೋಷಗಳ ಕ್ಷಣಗಳಿಂದ ಕೂಡಿರುತ್ತದೆ ಹೊರತು ಹತಾಶೆ ಅಥವಾ ಸೋಲುಗಳೇ ಕೊನೆಗಳಲ್ಲಾ.
ಹತಾಶೆ ಅಥವಾ ಸೋಲು ಬಂದಾಗ ತಾಳ್ಮೆಯಿಂದ ಸ್ವೀಕರಿಸಿ ಸುಂದರ ಬದುಕನ್ನು ಕಟ್ಟಿಕೊಳ್ಳುವುದರ ಜೊತೆಗೆ ಸಮಾಜದ ಜವಾಬ್ದಾರಿ ನಾಗರೀಕರಾಗಿ ಮುಂದಿನ ಪೀಳಿಗೆಗೆ ಸುಂದರ ಸಮಾಜವನ್ನು ಕಟ್ಟಿಕೊಡಬೇಕು ಎಂದು ಹೇಳಿದರು.
ಡ್ರಗ್ಸ ಸೇವನೆಯಿಂದ ಆಗುವ ಅಡ್ಡಪರಿಣಾಮಗಳ ಬಗ್ಗೆ ಮಾತನಾಡುತ್ತ ವ್ಯಕ್ತಿಯ ಮಾನಸಿಕ ಹಾಗೂ ದೈಹಿಕ ಆರೋಗ್ಯದ ಮೇಲೆ ಹೇಗೆ ದುಷ್ಪರಿಣಾಮ ಬೀರುತ್ತದೆ ಎಂಬುದರ ಬಗ್ಗೆ ವಿವರವಾಗಿ ತಿಳಿಸಿ ನೆರೆದಿದ್ದ ವಿದ್ಯಾರ್ಥಿಗಳಳಲ್ಲಿ ಮಾದಕ ವಸ್ತುಗಳ ಸೇವನೆ ಮಾರಕಗಳ ಬಗ್ಗೆ ಜಾಗೃತಿ ಮೂಡಿಸಿದರು.
ಮಾದಕ ದ್ರವ್ಯ ವಸ್ತುಗಳ ದುರ್ಬಳಕೆ ಮತ್ತು ಸೇವನೆಯಿಂದ ಉಂಟಾಗುವ ಅಪಾಯದ ಕುರಿತು ಜಾಗೃತಿ ಮೂಡಿಸುವಂತೆ ವಿದ್ಯಾರ್ಥಿಗಳಿಗೆ ಡಿಸಿಪಿ ಸ್ನೇಹಾ ಪ್ರತಿಜ್ಞಾ ವಿಧಿ ಬೋಧಿಸಿದರು.
ಈ ಸಂದರ್ಭದಲ್ಲಿ ಬೆಳಗಾವಿ ಗ್ರಾಮೀಣ ಪೋಲಿಸ್ ಠಾಣೆಯ ಇನ್ಸ್ಪೆಕ್ಟರ್ ಮಂಜುನಾಥ ಹಿರೇಮಠ, ವಿ ಟಿ ಯು ಹಣಕಾಸು ಅಧಿಕಾರಿ ಶ್ರೀಮತಿ ಎಂ ಎ ಸಪ್ನಾ, ಹಾಜರಿದ್ದರು.
ವಿ ಟಿ ಯು ಕುಲಸಚಿವರಾದ ಪ್ರೊ. ಬಿ. ಈ. ರಂಗಸ್ವಾಮಿ ಸ್ವಾಗತಿಸಿ ಪ್ರಾಸ್ತಾವಿಕ ಮಾತುಗಳನ್ನಾಡಿದರು. ಎಂ ಬಿ ಎ ವಿಭಾಗದ ಮುಖ್ಯಸ್ಥ ಪ್ರೊ. ಪ್ರಲ್ಹಾದ ರಾಥೋಡ ವಂದಿಸಿದರು.