18 ಶಾಸಕರು ಹನಿಟ್ರ್ಯಾಪ್ ಬಲೆಗೆ : ಯುವತಿ ಕೈಯಲ್ಲಿ ಸರ್ಕಾರ ಉರುಳಿಸುವ ಶಕ್ತಿ
ಭುವನೇಶ್ವರ : 26 ವರ್ಷದ ಯುವತಿಯೊಬ್ಬಳು ಬರೋಬ್ಬರಿ 25 ರಾಜಕಾರಣಿಗಳು ಸೇರಿಂದೆ, 18 ಜನ ಶಾಸಕರು ಹಾಗೂ ಸಚಿವರನ್ನು ಹನಿಟ್ರ್ಯಾಪ್ ಮಾಡುವ ಮೂಲಕ ಇಡೀ ಸರ್ಕಾರವನ್ನೇ ತನ್ನ ಕೈಯಲ್ಲಿ ಇಟ್ಟುಕೊಂಡಿದ್ದು ಬೆಳಕಿಗೆ ಬಂದಿದೆ.
ಅತ್ಯಂತ ಬಡ ಕುಟುಂಬದಲ್ಲಿ ಜನಿಸಿದ ಒಡಿಶಾದ 26 ವರ್ಷದ ಯುವತಿಯೊಬ್ಬಳು ರಾಜಕಾರಣಿಗಳು, ಉದ್ಯಮಿ, ಚಿತ್ರ ನಿರ್ಮಾಪಕರಂತಹ ಪ್ರಭಾವಿ ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡಿ ನಾಲ್ಕೇ ವರ್ಷಗಳಲ್ಲಿ 30 ಕೋಟಿ ರೂ. ಆಸ್ತಿ ಸಂಪಾದಿಸಿರುವ ಸಂಗತಿ ಬಯಲಾಗಿದೆ.
ಈಕೆಯಿಂದ ಹನಿಟ್ರ್ಯಾಪ್‌ಗೆ ಒಳಗಾದವರಲ್ಲಿ 25 ರಾಜಕಾರಣಿಗಳೂ ಇದ್ದಾರೆ. ಅದರಲ್ಲಿ 18 ಮಂದಿ ಆಡಳಿತಾರೂಢ ಬಿಜೆಡಿಯ ಸಚಿವರು ಹಾಗೂ ಶಾಸಕರಾಗಿದ್ದಾರೆ. ಹೀಗಾಗಿ ಈಕೆ ಬಾಯಿಬಿಟ್ಟರೆ ಒಡಿಶಾದಲ್ಲಿ 22 ವರ್ಷಗಳಿಂದ ಆಡಳಿತ ನಡೆಸುತ್ತಿರುವ ಬಿಜೆಡಿ ಸರ್ಕಾರ ಪತನಗೊಳ್ಳಲಿದೆ’ ಎಂದು ಬಿಜೆಪಿ ಹಾಗೂ ಕಾಂಗ್ರೆಸ್ ಬಾಂಬ್ ಸಿಡಿಸಿವೆ.
ಅರ್ಚನಾ ನಾಗ್ ಎಂಬ ಈ ಮಹಿಳೆ ಹನಿಟ್ರ್ಯಾಪ್‌ನಿಂದ ಭವ್ಯ ಬಂಗಲೆ, ಅದಕ್ಕೆ ಬೇಕಾದ ವಿದೇಶಿ ಅಲಂಕಾರಿಕ ವಸ್ತುಗಳು, ಐಷಾರಾಮಿ ಕಾರುಗಳು, 4 ದುಬಾರಿ ನಾಯಿಗಳು ಹಾಗೂ ಒಂದು ಕುದುರೆಯನ್ನೂ ಹೊಂದಿದ್ದಾಳೆ. ಇಷ್ಟೆಲ್ಲಾ ಅಕ್ರಮ ಎಸಗಿದ್ದರೂ ಕೇವಲ 2 ದೂರುಗಳು ಮಾತ್ರ ಸಲ್ಲಿಕೆಯಾಗಿವೆ. ಅದನ್ನು ಆಧರಿಸಿ ಅಕ್ಟೋಬರ್ 6 ರಂದು ಅರ್ಚನಾಳನ್ನು ಪೊಲೀಸರು ಬಂಧಿಸಿದ್ದಾರೆ.