
ತುಲಾಭಾರದ ಮೂಲಕ ಸಂವಿಧಾನ ಪೀಠಿಕೆಗೆ ಗೌರವ ನಮನ

ಮುಗಳಖೋಡ : ಪ್ರತಿಯೊಬ್ಬ ವ್ಯಕ್ತಿಯು ಕಾನೂನಿನ ಬಗ್ಗೆ ತಿಳಿದುಕೊಳ್ಳಬೇಕು ಮತ್ತು ಅದನ್ನು ಪಾಲಿಸಬೇಕು. ಮನುಷ್ಯನು ತಾಯಿ ಗರ್ಭದಲ್ಲಿದ್ದಾಗಿನಿಂದಲೇ ಕಾನೂನಿನ ರಕ್ಷಣೆ ಪ್ರಾರಂಭವಾಗುತ್ತದೆ ಎಂದು ಬಾಗಲಕೋಟೆಯ ಎರಡನೇ ಹೆಚ್ಚುವರಿ ದಿವಾನಿ ಮತ್ತು ಜೆ ಎಂ ಎಫ್ ಸಿ ನ್ಯಾಯಾಲಯದ ನ್ಯಾಯಾಧೀಶ ರಾಜಶೇಖರ ತಿಳಗಂಜಿ ಹೇಳಿದರು.
ರವಿವಾರ ಮುಗಳಖೋಡ ಪಟ್ಟಣದ ಶ್ರೀ ಯಲ್ಲಾಲಿಂಗೇಶ್ವರ ಮಹಾರಾಜರ 39 ನೇ ಪುಣ್ಯಾರಾದನೆ , ಹಾಗೂ 76 ನೇ ಗಣರಾಜ್ಯೋತ್ಸವದ ಪ್ರಯುಕ್ತ ಹಮ್ಮಿಕೊಂಡ
ಕಾನೂನು ಅರಿವು ನೆರವು ಕಾರ್ಯಕ್ರಮದಲ್ಲಿ ಮಾತನಾಡಿ, ಸಾಮಾಜಿಕ ನ್ಯಾಯದಲ್ಲಿ ಸಮಾನತೆ ತರಲಾಗಿದೆ, ಎಲ್ಲರಿಗೂ ಒಂದೇ ಕಾನೂನು ಇದೆ. ಬಾಲ ಕಾರ್ಮಿಕ ಪದ್ದತಿ, ಬಾಲ್ಯ ವಿವಾಹ, ಭ್ರಷ್ಟಾಚಾರ, ಅತ್ಯಾಚಾರ, ಕೊಲೆ ಸುಲುಗೆ ಇಂತಹ ಸಾಕಷ್ಟು ಕಾನೂನು ಬಾಹಿರ ಪದ್ದತಿಗಳಿಗೆ ಕಡಿವಾಣ ಹಾಕಲು
ಎಲ್ಲರಿಗೂ ಸಂವಿಧಾನ ಮಾಹಿತಿ ಇರಬೇಕು ಎಂದರು.
ಶ್ರೀ ಮಠದ ಬ್ರಹ್ಮ ವೇದಿಕೆಯಲ್ಲಿ ಸಂವಿಧಾನದ ಪೀಠಿಕೆಗೆ ಮಹಾತ್ಮ ಗಾಂಧೀಜಿ ಹಾಗೂ ಡಾ. ಬಿ ಆರ್ ಅಂಬೇಡ್ಕರ್ ರವರ ಭಾವಚಿತ್ರಕ್ಕೆ ಪರಮ ಪೂಜ್ಯ ಡಾ. ಮುರುಘರಾಜೇಂದ್ರ ಶ್ರೀಗಳು ಪೂಜೆ ಸಲ್ಲಿಸಿ, ಪುಷ್ಪಗಳಿಂದ ವಿಶೇಷ ತುಲಾಭಾರ ಮಾಡಿ, ಸಂವಿಧಾನಕ್ಕೆ ಗೌರವ ಸಮರ್ಪಣೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಶ್ರೀಗಳು. ವಿಶ್ವದಲ್ಲಿಯೇ ಭಾರತದ ಸಂವಿಧಾನ ಶ್ರೇಷ್ಠ ಸಂವಿಧಾನವಾಗಿದೆ. ಪ್ರತಿಯೊಬ್ಬ ಪ್ರಜೆಯು ಕಾನೂನಿನ ಜ್ಞಾನ ಪಡೆದು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು ಕಾನೂನಿನ ಚೌಕಟ್ಟಿನಲ್ಲಿ ಇರಬೇಕು. ಪ್ರತಿಯೊಬ್ಬರ ಮನೆಯಲ್ಲಿ ಸಂವಿಧಾನದ ಪೀಠಿಕೆ ಇಡಬೇಕು ಮತ್ತು ಅದರ ಸದುಪಯೋಗ ಪಡಿಸಿಕೊಂಡು ದೇವಾಲಯ ಮತ್ತು ನ್ಯಾಯಾಲಯದ ಮೇಲೆ ವಿಶ್ವಾಸವಿಟ್ಟು ಸತ್ಯದ ಮಾರ್ಗದಲ್ಲಿ ನಡೆಯಬೇಕು ಎಂದರು.
ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಮಹಾಸ್ವಾಮಿಗಳು, ರಾಯಬಾಗ ಹಿರಿಯ ದಿವಾನಿ ನ್ಯಾಯಾಲಯದ ನ್ಯಾಯಾಧೀಶ ಜಗದೀಶ ಬಿಸಿರೊಟ್ಟಿ, ಗದಗದ ಹೆಚ್ಚುವರಿ ದಿವಾನಿ ಮತ್ತು ಜೆಎಂಎಫ್ ಸಿ ನ್ಯಾಯಾಲಯ ಬೀರಪ್ಪ ಕಂಬಳಿ, ಬನಹಟ್ಟಿ ಹಿರಿಯ ದಿವಾನಿ ನ್ಯಾಯಾಲಯದ ನ್ಯಾಯಾಧೀಶ ಆಶಪ್ಪ, ಮೂಡಲಗಿ ಪ್ರಧಾನ ದಿವಾಣಿ ಮತ್ತು ಜೆಎಂಎಫ್‌ಸಿ ನ್ಯಾಯಾಧೀಶ ಜ್ಯೋತಿ ಪಾಟೀಲ, ರಾಯಬಾಗ ಪ್ರಧಾನ ದಿವಾನಿ ಮತ್ತು ಜೆಎಂಎಫ್‌ಸಿ ನ್ಯಾಯಾಲಯದ ನ್ಯಾಯಾಧೀಶ ಪ್ರಿಯ ಭಟ್ಟಡ ಮಾತನಾಡಿದರು.