ಸವದತ್ತಿ – ರಾಮದುರ್ಗ – ಕಿತ್ತೂರು ಜನರಿಗೆ ಆರೋಗ್ಯ ಸಚಿವರ ಸಿಹಿ ಸುದ್ದಿ….!
ಬೆಳಗಾವಿ : ಸುಮಾರು 46 ಕೋಟಿ ವೆಚ್ಚದಲ್ಲಿ ಸವದತ್ತಿಯಲ್ಲಿ ಮಲ್ಟಿ ಸ್ಪೆಷಾಲಿಟಿ ಆಸ್ಪತ್ರೆ ನಿರ್ಮಾಣಕ್ಕೆ ಅನುದಾನ ಬಿಡುಗಡೆ ಮಾಡಲಾಗುವುದು. ಅದೇ ರೀತಿಯಲ್ಲಿ ರಾಮದುರ್ಗ, ಕಿತ್ತೂರು ತಾಲೂಕುಗಳಲ್ಲಿ ಸಹ ನೂತನ ಸುಸಜ್ಜಿತ ಆಸ್ಪತ್ರೆ ನಿರ್ಮಾಣಕ್ಕೆ ಕ್ರಮ ವಹಿಸಲಾಗಿದೆ ಎಂದು ಆರೋಗ್ಯ ಸಚಿವ ಗುಂಡೂರಾವ್ ತಿಳಿಸಿದರು.
ಭಾನುವಾರ ಸವದತ್ತಿ ತಾಲೂಕಿನಲ್ಲಿ ಬೃಹತ್ ಆರೋಗ್ಯ ಮೇಳ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಇವರು,
ಜನರಿಗೆ ಖಾಸಗಿ ಆಸ್ಪತ್ರೆಗಳ ಮಾದರಿಯಲ್ಲಿ ವೈದ್ಯಕೀಯ ಸೇವೆ ಒದಗಿಸುವ ನಿಟ್ಟಿನಲ್ಲಿ ಆರೋಗ್ಯ ಮೇಳ ಆಯೋಜನೆ ಮಾಡಲಾಗಿದೆ. ರಾಜ್ಯದ ವಿವಿಧೆಡೆಯಿಂದ ಚಿಕಿತ್ಸೆ ಮಳಿಗೆಗಳನ್ನು ಸ್ಥಾಪಿಸಲಾಗಿದ್ದು, ಸಾರ್ವಜನಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದರು.
ಖಾನಾಪೂರ ತಾಲೂಕಿನ ಈಗಾಗಲೇ ತಾಯಿ ಮಕ್ಕಳ ಆಸ್ಪತ್ರೆ ಹಾಗೂ ನೂತನ ಜಿಲ್ಲಾ ಆಸ್ಪತ್ರೆ ಉದ್ಘಾಟನೆ ಮಾಡಲಾಗಿದೆ. ಇನ್ನೂ ಗೋಕಾಕಿನಲ್ಲಿ ಜಿಲ್ಲಾ ಆಸ್ಪತ್ರೆ ಮಾದರಿಯ ಆಸ್ಪತ್ರೆ ನಿರ್ಮಾಣ ಮಾಡಲಾಗುವುದು ಎಂದು ಹೇಳಿದರು.
ಜಿಲ್ಲೆಯಲ್ಲಿ ಅಂಧತ್ವ ನಿವಾರಣಾ 38 ಸಾವಿರ ರೋಗಿಗಳಿಗೆ ನೇತ್ರ ಚಿಕಿತ್ಸ ಮಾಡಲಾಗಿದೆ. ಬರುವ ದಿನಗಳಲ್ಲಿ ಗೃಹ ಆರೋಗ್ಯ ಯೋಜನೆಯಡಿ ಪ್ರತಿ ಕುಟುಂಬ, ಪ್ರತಿ ವ್ಯಕ್ತಿಯ ತಪಾಸಣೆ ಕಾರ್ಯಕ್ರಮ ಹಮ್ಮಿಕೊಂಡು ಮನೆಗಳಿಗೆ ಔಷಧಿಗಳನ್ನು ಒದಗಿಸಲು ವಿಶೇಷ ಕಾರ್ಯಕ್ರಮ ಹಮ್ಮಿಕೊಳ್ಳಲಾಗುವುದು ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಏಪ್ರಿಲ್ ತಿಂಗಳ ಮೊದಲ ವಾರದಲ್ಲಿ ರಾಜ್ಯದ ಎಲ್ಲಾ ಜನರ ಮನೆ ಬಾಗಿಲಲ್ಲಿ ಆರೋಗ್ಯ ತಪಾಸಣೆ ನಡೆಸುವ ಗೃಹ ಆರೋಗ್ಯ ಯೋಜನೆ ಜಾರಿಯಾಗಲಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವ ದಿನೇಶ್ ಗುಂಡೂರಾವ್ ಹೇಳಿದರು.
ಸವದತ್ತಿಯಲ್ಲಿ ಯಶಸ್ವಿಯಾಗಿ ಆರೋಗ್ಯ ಮೇಳ ನಡೆಯುತ್ತಿದೆ. ತಮ್ಮ ಆರೋಗ್ಯದ ಸಮಸ್ಯೆಗೆ ಚಿಕಿತ್ಸೆ ಪಡೆದುಕೊಳ್ಳಲು ಬಹಳಷ್ಟು ದೂರದಿಂದ ಸಾರ್ವಜನಿಕರು ಆಗಮಿಸುತ್ತಿದ್ದಾರೆ. ಅಧಿಕಾರಿಗಳ ಪರಿಶ್ರಮದಿಂದ ಆರೋಗ್ಯ ಮೇಳ ಯಶಸ್ವಿಗೊಳಿಸಿದ್ದಾರೆ. ಚಿಕಿತ್ಸೆ ಒದಗಿಸಲು ಜಿಲ್ಲೆಯ ಎಲ್ಲಾ ಸರ್ಕಾರಿ ಆಸ್ಪತ್ರೆಯ ವೈದ್ಯರು, ಖಾಸಗಿ ಆಸ್ಪತ್ರೆಗಳು ಬಂದಿವೆ ಎಂದರು.

