ಸಚಿವ ಸತೀಶ್ ಮನೆಯಲ್ಲಿ ಕುಮಠಳ್ಳಿ ಪ್ರತ್ಯಕ್ಷ ; ಇದಕ್ಕೆ ಏನು ಹೇಳ್ತಿರಾ ಎಂದ ಸವದಿ ಬೆಂಬಲಿಗರು
ಬೆಳಗಾವಿ : ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹಾಗೂ ಲೋಕೋಪಯೋಗಿ ಸಚಿವ ಸತೀಶ್ ಜಾರಕಿಹೊಳಿ ನಡುವಿನ ಮಾತಿನ ಸಮರ ಶಾಂತವಾದಂತೆ ಕಂಡರು ಅವರ ಅಭಿಮಾನಿಗಳು ಮಾತ್ರ ಹೊಸ, ಹೊಸ ವಾದಗಳನ್ನು ಮುಂದಿಡುವ ಮೂಲಕ ಪ್ರಶ್ನೆ ಮಾಡುತ್ತಿದ್ದಾರೆ.
ಬೆಳಗಾವಿ ಉಸ್ತುವಾರಿ ಸಚಿವ ಸತೀಶ್ ಜಾರಕಿಹೊಳಿ ಅವರ ಮನೆಯಲ್ಲಿ ಅಥಣಿಯ ಮಾಜಿ ಬಿಜೆಪಿ ಶಾಸಕ ಮಹೇಶ್ ಕುಮಠಳ್ಳಿ ನಿಂತಿರುವ ಪೋಟೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದ್ದು, ಇದಕ್ಕೆ ಏನು ಹೇಳುತ್ತೀರಿ ಜಾರಕಿಹೊಳಿ ಅವರೇ ಎಂದು ಲಕ್ಷ್ಮಣ ಸವದಿ ಅಭಿಮಾನಿಗಳು ಪ್ರಶ್ನೆ ಮಾಡಿದ್ದಾರೆ.
ಲೋಕಸಭಾ ಚುನಾವಣೆ ಸಂದರ್ಭದಲ್ಲಿ ಅಥಣಿ ಕ್ಷೇತ್ರದಲ್ಲಿ ಕಾಂಗ್ರೆಸ್ ಶಾಸಕರಿದ್ದರು ಬಿಜೆಪಿಗೆ ಹೆಚ್ಚಿನ ಮತಗಳ ಲೀಡ್ ಆ ವಿಚಾರವಾಗಿ ಸತೀಶ್ ಜಾರಕಿಹೊಳಿ ಅವರು ಲಕ್ಷ್ಮಣ ಸವದಿ ಅವರ ವಿರುದ್ಧ ಆಕ್ರೋಶ ಹೊರಹಾಕಿದ್ದರು. ನಮ್ಮ ನಂಬಿಕೆಗೆ ಮೋಸವಾಗಿದೆ ಎಂದು ಹೇಳುವ ಮೂಲಕ ಸವದಿಗೆ ಟಾಂಗ್ ನೀಡಿದ್ದರು.
ಇದೇ ವಿಚಾರವಾಗಿ ಪ್ರತಿಕ್ರಿಯೆ ನೀಡಿದ್ದ ಮಾಜಿ ಡಿಸಿಎಂ ಹಾಗೂ ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ. ಅವರು ಮಾಡಿರುವ ತಪ್ಪಿನಿಂದ ನಮಗೆ ಹಿನ್ನಡೆಯಾಗಿದೆ. ಇಲ್ಲಿ ಆಗಿರುವ ತಪ್ಪುಗಳ ಕುರಿತು ಪಕ್ಷದ ವೇದಿಕೆಯಲ್ಲಿ ಚರ್ಚೆ ನಡೆಸುತ್ತೇವೆ ಎಂದು ಸಚಿವ ಸತೀಶ್ ವಿರುದ್ಧ ಹೇಳಿಕೆ ನೀಡಿದ್ದರು.
ಇವೆಲ್ಲದರ ಬೆನ್ನಲ್ಲೇ ಜಾರಕಿಹೊಳಿ ಮನೆತನದ ಆಪ್ತರಲ್ಲಿ ಒಬ್ಬರಾದ ಮಾಜಿ ಶಾಸಕ ಮಹೇಶ್ ಕುಮಠಳ್ಳಿ ಸಧ್ಯ ಸಚಿವ ಸತೀಶ್ ಮನೆಯಲ್ಲಿ ಪ್ರತ್ಯಕ್ಷವಾಗಿದ್ದು ಇದು ಸವದಿ ಬೆಂಬಲಿಗರನ್ನು ಕೆರಳಿಸಿದೆ. ಈ ಕುರಿತು ಸೋಶಿಯಲ್ ಮೀಡಿಯಾದಲ್ಲಿ ಚರ್ಚೆ ಹುಟ್ಟುಹಾಕಿದೆ.