
ಬಂಗಾರ, ಬೆಳ್ಳಿ ಕೊಡುವವರಿಗೆ ಮತ ಮಾರಿಕೊಳ್ಳಬೇಡಿ : ಲಕ್ಷ್ಮಣ ಸವದಿ

ಬೆಳಗಾವಿ : ಚುನಾವಣೆ ಸಂದರ್ಭದಲ್ಲಿ ಬಂಗಾರ, ಬೆಳ್ಳಿ, ಹಣ ಕೊಡುವವರಿಗೆ ನಿಮ್ಮ ಮತ ಮಾರಿಕೊಳ್ಳಬೇಡಿ. ಗ್ರಾಮ ಪಂಚಾಯತಿಗಳ ಸರ್ವಾಂಗೀಣ ಅಭಿವೃದ್ಧಿಗೆ ಕಳೆದ 12 ವರ್ಷಗಳಿಂದ ಶ್ರಮಿಸುತ್ತಿರುವ ಮಹಾಂತೇಶ ಕವಠಗಿಮಠ ಅವರಿಗೆ ನಿಮ್ಮ ಮತ ನೀಡಿ ಎಂದು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಹೇಳಿದರು.
ಇಂದು ನಗರದಲ್ಲಿ ನಡೆದ ಜನಸ್ವರಾಜ್ ಸಭೆ ಉದ್ದೇಶಿಸಿ ಮಾತನಾಡಿದ ಇವರು. ಮಹಾಂತೇಶ ಕವಠಗಿಮಠ ಅಧಿವೇಶನ ಸಂದರ್ಭದಲ್ಲಿ ಗ್ರಾಮ ಪಂಚಾಯತಿಗಳ ಕುರಿತು ಅದೆಷ್ಟೋ ಚರ್ಚೆ ಮಾಡುವ ಮೂಲಕ ನ್ಯಾಯ ಒದಗಿಸುವ ಮಾಡಿದ್ದಾರೆ. ಇವರಿಗೆ ತಮ್ಮ ಮೊದಲ ಪ್ರಾಶಸ್ತ್ಯದ ಮತ ಕೊಟ್ಟು ಗೆಲ್ಲಿಸುವಂತೆ ಕರೆಕೊಟ್ಟರು.
ಸ್ಥಳೀಯ ಸಂಘ ಸಂಸ್ಥೆಗಳ ಜನಪ್ರತಿನಿಧಿಗಳು ಮತಗಳನ್ನು ಪಡೆದು ಆಯ್ಕೆಯಾಗಿದ್ದೀರಿ. ನಿಮ್ಮ ಧ್ವನಿ ಹಾಗೂ ನಿಮ್ಮ ಪರ ಮಾತನಾಡುವ ನಾಯಕನನ್ನು ಮೇಲ್ಮನೆಗೆ ಕಳುಹಿಸಬೇಕಿದೆ. ಗ್ರಾಪಂ ಸಂಕಷ್ಟಗಳಿಗೆ ಸ್ಪಂದಿಸುವ ಪ್ರಾಮಾಣಿಕ ವ್ಯಕ್ತಿ ಮಹಾಂತೇಶ ಕವಟಗಿಮಠ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕು. ಅವರು ಕಳೆದ ಹನ್ನೆರಡು ವರ್ಷದಲ್ಲಿ ಗ್ರಾಪಂ, ಹಳ್ಳಿಯಲ್ಲಿರುವ ರಸ್ತೆ, ಕುಡಿಯುವ ನೀರಿನ ಬಗ್ಗೆ ಮೇಲ್ಮನೆಯಲ್ಲಿ ಗಟ್ಟಿ ಧ್ವನಿ ಎತ್ತಿ ಬಗೆಹರಿಸಿದ್ದಾರೆ ಎಂದರು.

ಬೆಳಗಾವಿ ಜಿಲ್ಲೆಯಲ್ಲಿ 8,700 ಮತದಾರರಿದ್ದಾರೆ. ಅದರಲ್ಲಿ 6,000 ಮತದಾರರು ಬಿಜೆಪಿ ಬೆಂಬಲಿತ ಅಭ್ಯರ್ಥಿಗಳು ಆಯ್ಕೆಯಾಗಿ ಬಂದಿದ್ದಾರೆ. ಮಹಾಂತೇಶ ಕವಟಗಿಮಠ ಅವರ ಗೆಲವು ಕಷ್ಟವಾಗುವುದಿಲ್ಲ. ಎಲ್ಲ ಮತದಾರರು ಮೊದಲ ಪ್ರಾಶಸ್ತ್ಯ ಮತ ನೀಡಿ ಸ್ಪಷ್ಟ ಬಹುಮತದಿಂದ ಆಯ್ಕೆ ಮಾಡಬೇಕೆಂದರು.
ಮತದಾನ ಯೋಗ್ಯ ವ್ಯಕ್ತಿಗೆ ಮಾಡಿ ಸ್ವಾಭಿಮಾನ ಮಾರಿಕೊಳ್ಳಬೇಡಿ. ನಿಮ್ಮ ಮನೆಗೆ ಬಂದು ಆಮಿಷ ತೋರಿಸುತ್ತಾರೆ. ಸ್ವಾಭಿಮಾನ ಜೀವನಕ್ಕೆ ಧಕ್ಕೆ ತರುವುದು ಬೇಡ. ಬೆಳಗಾವಿಯಲ್ಲಿ ಆಶ್ಚರ್ಯಕರ ಚುನಾವಣೆ ನಡೆಯುತ್ತಿದೆ. ಇಡೀ ರಾಜ್ಯದ ಜನರು ನೋಡುತ್ತಿದ್ದಾರೆ. ಸ್ವಾಭಿಮಾನಕ್ಕೆ ಮತ ನೀಡುತ್ತಾರೋ ಅಥವಾ ಮಾರಾಟವಾಗುತ್ತಾರೆ ಎಂದು. ಬಿಜೆಪಿ ಕಾರ್ಯಕರ್ತರ ಪಕ್ಷ ಮತದಾನ ಮಾಡುವ ಮುನ್ನ ಕವಟಗಿಮಠ ಅವರಿಗೆ ಮೊದಲ ಪ್ರಾಶಸ್ತ್ಯ ಮತ ನೀಡಬೇಕೆಂದು ಮನವಿ ಮಾಡಿಕೊಂಡರು.

ರಾಜ್ಯದಲ್ಲಿ ಯಡಿಯೂರಪ್ಪನವರು ಮುಖ್ಯಮಂತ್ರಿಯಾದ ವೇಳೆ ಸಾಕಷ್ಟು ಅಭಿವೃದ್ಧಿ ಕೆಲಸಗಳನ್ನು ಮಾಡಿದ್ದಾರೆ. ಮಹಿಳೆಯರು, ರೈತರು,ದೀನ ದಲಿತರು ಎಲ್ಲ ಸಮುದಾಯದವರಿಗೆ ನ್ಯಾಯ ಕೊಡಿಸುವ ಕೆಲಸ ಮಾಡಿದ್ದಾರೆ. ಕರ್ನಾಟಕದಲ್ಲಿ ಎರಡನೇ ರಾಜಧಾನಿ ಬೆಳಗಾವಿಯಾಗಲು ಕಾರಣಿಭೂತ ಯಡಿಯೂರಪ್ಪ. ಬೆಳಗಾವಿಯಲ್ಲಿ ವಿಧಾನಸೌಧ ನಿರ್ಮಾಣ ಮಾಡಿ ಶಕ್ತಿ ಸೌಧದಲ್ಲಿ ವರ್ಷಕ್ಕೊಮ್ಮೆ ಸರಕಾರ ಅಧಿವೇಶನ ನಡೆಸುವ ಕೆಲಸ ಮಾಡಿದರು.