ಸಿಂದಗಿ ಮತಕ್ಷೇತ್ರದಲ್ಲಿ ನಡೆಯುತ್ತಾ ಸವದಿ ಮ್ಯಾಜಿಕ್
ಬೆಳಗಾವಿ : ಉಪ ಚುನಾವಣೆಯ ಮಾಸ್ಟರ್ ಮೈಂಡ್ ಎಂದೇ ಖ್ಯಾತರಾಗಿರುವ ಮಾಜಿ ಡಿಸಿಎಂ ಲಕ್ಷಣ ಸವದಿ ಅವರಿಗೆ ಬಿಜೆಪಿ ಮತ್ತೊಂದು ಟಾಸ್ಕ್ ನೀಡಿದ್ದು, ಸಿಂದಗಿ ವಿಧಾನಸಭಾ ಉಪ ಚುನಾವಣೆ ಉಸ್ತುವಾರಿಗಳಾಗಿದ್ದಾರೆ. 12 ಜನ ಉಸ್ತುವಾರಿಗಳ ಪಟ್ಟಿಯಲ್ಲಿರುವ ಲಕ್ಷಣ ಸವದಿ ಮೇಲೆಯೇ ಸಧ್ಯ ಎಲ್ಲರ ದೃಷ್ಟಿ ನೆಟ್ಟಿರುವುದು.
ಹೌದು ಈ ಹಿಂದೆ ನಡೆದ ಎಲ್ಲಾ ಉಪ ಚುನಾವಣೆಯಲ್ಲಿ ಬಿಜೆಪಿ ತನ್ನ ಶಕ್ತಿ ತೋರಿಸಿದೆ. ಬಿಜೆಪಿ ಸತತ ಹೆಲುವಿನ ಹಿಂದೆ ಕೆಲವು ನಾಯಕರ ಪರಿಶ್ರಮ ಕೂಡಾ ಅಡಗಿದ್ದು ಅಂತಹ ನಾಯಕರಿಗೆ ಸಧ್ಯ ಮತ್ತೊಂದು ಪರೀಕ್ಷೆಯನ್ನು ಪಕ್ಷ ನೀಡಿದೆ. ಈ ನಿಟ್ಟಿನಲ್ಲಿ ಬರುವ ಎರಡು ಕ್ಷೇತ್ರದ ಉಪ ಚುನಾವಣೆಗೆ ಬಿಜೆಪಿ ಉಸ್ತುವಾರಿಗಳನ್ನು ನೇಮಿಸಿದ್ದು ಸಿಂದಗಿ ಕ್ಷೇತ್ರಕ್ಕೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಅವರನ್ನು ನೇಮಿಸಲಾಗಿದೆ.
ಸವದಿ ಚುನಾವಣೆ ತಂತ್ರಗಾರ : ಸಾರ್ವತ್ರಿಕ ಚುನಾವಣೆ ಅಥವಾ ಉಪ ಚುನಾವಣೆ ಯಾವುದೇ ಇದ್ದರು ಸವದಿ ಅವರದ್ದು ತಮ್ಮದೇ ಆದ ಚುನಾವಣೆ ತಂತ್ರಗಾರಿಕೆ ಮಾಡುವ ಶಕ್ತಿ ಇದೆ. ಸ್ಥಳೀಯ ಕಾರ್ಯಕರ್ತರನ್ನು ಗಮನಕ್ಕೆ ತಗೆದುಕೊಂಡು ಕೆಲಸ ಮಾಡುವ ಇವರ ಚಾಣಾಕ್ಷತೆ ಪಕ್ಷಕ್ಕೆ ಮನವರಿಕೆಯಾಗಿದೆ. ಇದೇ ಕಾರಣಕ್ಕಾಗಿ ಸವದಿ ಅವರನ್ನು ಉಪ ಚುನಾವಣೆ ಉಸ್ತುವಾರಿ ತಂಡದಲ್ಲಿ ಬಿಜೆಪಿ ಬಳಸಿಕೊಳ್ಳುತ್ತದೆ. ಜೊತೆಗೆ ಅನುಭವ ಕೂಡ ಪಕ್ಷಕ್ಕೆ ಲಾಭವಾಗುತ್ತಿದೆ.
ಬಿಜೆಪಿ ಲೆಕ್ಕಾಚಾರ : ಸಿ ಎಂ ಉದಾಸಿ ನಿಧನದಿಂದ ತೆರವಾದ ಹಾನಗಲ್ ವಿಧಾನಸಭಾ ಕ್ಷೇತ್ರಕ್ಕೆ ರೇವತಿ ಉದಾಸಿ ಅವರಿಗೆ ಟಿಕೆಟ್ ನೀಡಲು ಬಿಜೆಪಿ ನಿರ್ಧರಿಸಿದೆ. ಜೊತೆಗೆ ತನ್ನದೇ ಕ್ಷೇತ್ರವನ್ನು ಉಳಿಸಿಕೊಳ್ಳಲು ಬಿಜೆಪಿಗೆ ಸವಾಲಾಗಿದೆ. ಇನ್ನೂ ಸಿಂದಗಿ ವಿಧಾನಸಭಾ ಕ್ಷೇತ್ರಕ್ಕೆ ರಮೇಶ್ ಭೂಸನೂರ ಅವರಿಗೆ ಟಿಕೆಟ್ ನೀಡಲು ಬಿಜೆಪಿ ಚಿಂತನೆ ನಡೆಸಿದ್ದು ಅಂತಿಮ ಹಂತ ತಲುಪಿದೆ ಎಂದು ಹೇಳಬಹುದು.