ಸಾಹುಕಾರ್ ವಿರುದ್ಧ ತೊಡೆತಟ್ಟಿದ ಸವದಿ ಪುತ್ರ : ರಂಗು ಪಡೆದ ಅಥಣಿ ಅಖಾಡ
ಅಥಣಿ : ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ ಲಕ್ಷ್ಮಣ ಸವದಿ ಸ್ಪರ್ಧಿಸುತ್ತಾರೆ ಎಂದು ಹೇಳುವ ಮೂಲಕ ಗೋಕಾಕ್ ಸಾಹುಕಾರ್ ರಮೇಶ್ ಜಾರಕಿಹೊಳಿ ವಿರುದ್ಧ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಪುತ್ರ ಚಿದಾನಂದ ಸವದಿ ಬಹಿರಂಗವಾಗಿ ಮಾತನಾಡಿದ್ದಾರೆ.
ನಗರದಲ್ಲಿ ನಡೆದ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಇವರು. ಲಕ್ಷ್ಮಣ ಸವದಿ ಕಳೆದ ಎರಡು ದಶಕಗಳಿಂದ ಅಥಣಿಯಲ್ಲಿ ಪಕ್ಷ ಸಂಘಟನೆ ಮಾಡಿದ್ದಾರೆ. ಈ ಹಿಂದೆ ಅನಿವಾರ್ಯವಾಗಿ ಕ್ಷೇತ್ರ ಬಿಟ್ಟುಕೊಟ್ಟಿದ್ದು ಮುಂಬರುವ ಚುನಾವಣೆಯಲ್ಲಿ ತಂದೆಯ ಸ್ಪರ್ಧೆ ಖಚಿತ ಎಂದು ಹೇಳುವ ಮೂಲಕ ಚಿದಾನಂದ ಸವದಿ ಜಾರಕಿಹೊಳಿಗೆ ಟಾಂಗ್ ನೀಡಿದ್ದಾರೆ.
ಕಳೆದ ಎರಡು ದಿನಗಳ ಹಿಂದೆ ಅಥಣಿಯಲ್ಲಿ ನಡೆದ ಬಿಜೆಪಿ ವಿಜಯ ಸಂಕಲ್ಪ ಯಾತ್ರೆ ಸಂದರ್ಭದಲ್ಲಿ ಮುಂಬರುವ ಚುನಾವಣೆಯಲ್ಲಿ ಶಾಸಕ ಮಹೇಶ್ ಕುಮಠಳ್ಳಿ ಬೆಂಬಲಿಸುವಂತೆ ರಮೇಶ್ ಜಾರಕಿಹೊಳಿ ಹೇಳಿಕೆ ನೀಡಿದ್ದರು. ನಂತರ ವಿಜಯಪುರದಲ್ಲಿ ಮಾತನಾಡಿ ಮಹೇಶ್ ಕುಮಠಳ್ಳಿಗೆ ಟಿಕೆಟ್ ನೀಡದಿದ್ದರೆ ನಾನು ಗೋಕಾಕ್ ನಿಂದ ಸ್ಪರ್ಧಿಸಲ್ಲ ಎಂದಿದ್ದರು.
ಈಗಾಗಲೇ ಅಥಣಿಯಲ್ಲಿ ಸವದಿ ಹಾಗೂ ಕುಮಠಳ್ಳಿ ಟೀಂಗಳಾಗಿದ್ದು ಬಿಜೆಪಿ ಕಾರ್ಯಕರ್ತರು ಹರಿದು ಹಂಚಿ ಹೋಗಿದ್ದಾರೆ. ಈ ಎಲ್ಲಾ ಬೆಳವಣಿಗೆಯಿಂದ ಕಾಂಗ್ರೆಸ್ ಮುಂಬರುವ ಚುನಾವಣೆಯಲ್ಲಿ ಗೆಲುವಿನ ಲೆಕ್ಕಾಚಾರ ಹಾಕಿದ್ದು ಸುಳ್ಳಲ್ಲ.