
ಕುಂಭಮೇಳ ದುರಂತ ; ತಂದೆಯ ಶವದ ಮುಂದೆ ಬಿಕ್ಕಿ, ಬಿಕ್ಕಿ ಕಣ್ಣೀರಿಟ್ಟ ಪುತ್ರ

ಬೆಳಗಾವಿ : ಪ್ರಯಾಗರಾಜ್ ನಲ್ಲಿ ನಡೆಯುತ್ತಿರುವ ಮಹಾಕುಂಭಮೇಳದಲ್ಲಿ ಉಂಟಾದ ಕಾಲ್ತುಳಿತದಲ್ಲಿ ಸಿಲುಕಿ ಮೃತಪಟ್ಟಿದ್ದ ಬೆಳಗಾವಿಯ ನಾಲ್ವರ ಪೈಕಿ ಇಬ್ಬರ ಮೃತದೇಹ ಗುರುವಾರ ಸಂಜೆ ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದಿವೆ.
ಗುರುವಾರ ಸಂಜೆ ದೆಹಲಿಯಿಂದ ಬೆಳಗಾವಿಗೆ ವಿಮಾನದ ಮೂಲಕ ಶೆಟ್ಟಿ ಗಲ್ಲಿಯ ಅರುಣ್ ಕೋರ್ಪಡೆ (61), ಶಿವಾಜಿನಗರ ನಿವಾಸಿ ಮಹಾದೇವಿ ಬಾವನೂರ (48) ಮೃತದೇಹ ತರಲಾಯಿತು. ಈ ಸಂದರ್ಭದಲ್ಲಿ ಎರಡೂ ಕುಟುಂಬದ ಸದಸ್ಯರ ಆಕ್ರಂದನ ಮುಗಿಲು ಮುಟ್ಟಿತ್ತು.
ಅರುಣ್ ಕೋರ್ಪಡೆ ಅವರ ಮೃತದೇಹದ ಮುಂದೆ ನಿಂತು ಕಣ್ಣೀರು ಹಾಕಿರುವ ಪುತ್ರ ಬಿಕ್ಕಿ, ಬಿಕ್ಕಿ ಅತ್ತಿದ್ದಾನೆ. ಈ ಸಂದರ್ಭದಲ್ಲಿ ನೆರೆದಿದ್ದವರು ಸಮಾಧಾನಪಡಿಸುವ ಪ್ರಯತ್ನ ಮಾಡಿದ್ದಾರೆ.
ಸಾಂಬ್ರಾ ವಿಮಾನ ನಿಲ್ದಾಣಕ್ಕೆ ಬಂದ ಇಬ್ಬರ ಮೃತದೇಹಗಳಿಗೆ ಮಾಜಿ ಸಿಎಂ ಜಗದೀಶ್ ಶೆಟ್ಟರ್, ಸಂಸದೆ ಪ್ರಿಯಾಂಕಾ ಜಾರಕಿಹೊಳಿ, ಶಾಸಕ ಅಭಯ್ ಪಾಟೀಲ,
ಶಾಸಕ ಆಸೀಫ್ ಸೇಠ್, ಮಾಜಿ ಶಾಸಕ ಅನಿಲ್ ಬೆನಕೆ ಸೇರಿದಂತೆ ಹಿರಿಯ ಅಧಿಕಾರಿಗಳು ಅಂತಿಮ ನಮನ ಸಲ್ಲಿಸಿದ ನಂತರ ಮೃತದೇಹಗಳನ್ನು ಕುಟುಂಬದವರಿಗೆ ಹಸ್ತಾಂತರಿಸಿದರು.