ರೊಕ್ಕ ಕೊಟ್ಟರ ಹೆಂಡ್ತಿ ಆಗ್ತಾರ, ಕೈ ಕೊಟ್ಟ ಓಡಿ ಹೋಗ್ತಾರ ;ಸಿಂಗಲ್ಸ್ ಹುಡುಗರೇ ಹುಷಾರ್….!
ಬೆಳಗಾವಿ : ಮದುವೆಯಾಗದ ಯುವಕರಿಗೆ ಮದುವೆ ಮಾಡಿಸುವುದಾಗಿ ಹೇಳಿ ಯುವತಿಯರನ್ನು ಸೆಟ್ ಮಾಡಿಸುವ ಇವರು ನಂತರ ಗಂಡನ ಮನೆಯ ಆಭರಣ, ಹಣ ಕದ್ದು ಪರಾರಿಯಾಗುವ ಖತರ್ನಾಕ್ ಗ್ಯಾಂಗ್ ರಾಯಬಾಗ ಜನರ ಕೈಗೆ ಸಿಕ್ಕಿದೆ.
ಮಹಾರಾಷ್ಟ್ರ ಮೂಲದ ಆರೋಪಿಗಳು ಏಜೆಂಟರ ಮೂಲಕ ಮದುವೆಯಾಗದ ಯುವಕರನ್ನು ಟಾರ್ಗೆಟ್ ಮಾಡಿ ಐದು ಲಕ್ಷ ಹಣಕ್ಕೆ ಬೇಡಿಕೆ ಇಟ್ಟು ಮದುವೆ ಮಾಡಿಸುವುದಾಗಿ ನಂಬಿಸುತ್ತಾರೆ. ಯಾರಿಗೂ ಅನುಮಾನ ಬರದಂತೆ ಈ ಗ್ಯಾಂಗ್ ಕೆಲಸ ಮಾಡುತ್ತದೆ.
ನಂತರ ಹಣ ಪಡೆದು ಯುವಕನ ಮನೆಯಿಂದ ಲಕ್ಷಾಂತರ ರು. ವೆಚ್ಚದಲ್ಲಿ ಮದುವೆ ಮಾಡಿಸಿ ಆನಂತರ ಮದುವೆ ಹೆಣ್ಣು ಪರಾರಿಯಾಗುತ್ತಾಳೆ. ಮನೆಯಲ್ಲಿ ಇದ್ದ ಬಂಗಾರ ಆಭರಣದ ಜೊತೆ ಪರಾರಿಯಾಗುವ ಗ್ಯಾಂಗ್ ಅನ್ನು ರಾಯಬಾಗದಲ್ಲಿ ಸೆರೆ ಹಿಡಿಯಲಾಗಿದೆ.
ರಾಯಬಾಗ ತಾಲೂಕಿನ ಕಂಕಣವಾಡಿ ಗ್ರಾಮದಲ್ಲಿ ಇದೇ ರೀತಿಯಲ್ಲಿ ಮದುವೆಯಾಗಿ ವಂಚಿಸಲು ಯತ್ನಿಸಿದ್ದ ಗ್ಯಾಂಗ್ ಅನ್ನು ಸ್ಥಳೀಯರು ಹಿಡಿದಿದ್ದಾರೆ. ಪಕ್ಕದ ಮಹಾರಾಷ್ಟ್ರ ರಾಜ್ಯದಿಂದ ಬಂದಿರುವ ಗ್ಯಾಂಗ್ ಎನ್ನಲಾಗುತ್ತಿದೆ. ಜಿಲ್ಲೆಯ ಹಲವಾರು ತಾಲೂಕಿನಲ್ಲಿ ನಕಲಿ ಮದುವೆಯ ಕೃತ್ಯ ಎಸಗಿ ಈ ಗ್ಯಾಂಗ್ ಪರಾರಿಯಾಗುತ್ತಿತ್ತು ಎಂದು ತಿಳಿದುಬಂದಿದೆ.
ವಂಚನೆ ಮಾಡುತ್ತಿದ್ದ ಗ್ಯಾಂಗ್ ನ್ನು ರಾಯಬಾಗ ಪೊಲೀಸ್‌ರಿಗೆ ಒಪ್ಪಿಸಿದ್ದಾರೆ. ವಂಚನೆಗೆ ಒಳಗಾದವನು ಕೇಸ್ ದಾಖಲಿಸಲು ಹಿಂದೇಟು ಹಾಕುತ್ತಿದ್ದು, ಹೀಗಾಗಿ ಕೇಸ್ ದಾಖಲಿಸದೇ ಪೊಲೀಸರು ವಂಚನೆ ಮಾಡಿದ ಗ್ಯಾಂಗ್ ಅನ್ನು ಬಿಟ್ಟು ಕಳುಹಿಸಿದ್ದಾರೆ.