Select Page

ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ : ಬಾಲಚಂದ್ರ ಜಾರಕಿಹೊಳಿ

ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ : ಬಾಲಚಂದ್ರ ಜಾರಕಿಹೊಳಿ

ಕಿತ್ತೂರು : ಶೀಘ್ರದಲ್ಲೇ ನಂದಿನಿ ಹಾಲಿನ ದರ ಪರಿಷ್ಕರಣೆ ಮಾಡಲಾಗುವುದು, ಪ್ರತಿಲೀಟರ್ ಹಾಲಿಗೆ 3 ರೂಪಾಯಿ ಹೆಚ್ಚಳ ಮಾಡಲಾಗುವುದು, ಈ ದರ ಏರಿಕೆಯಿಂದ ರೈತರಿಗೆ ವರದಾನವಾಗಲಿದೆ ಎಂದು ಕೆಎಂಎಫ್ ಅಧ್ಯಕ್ಷ, ಅರಭಾವಿ ಶಾಸಕ ಬಾಲಚಂದ್ರ ಜಾರಕಿಹೊಳಿ ಹೇಳಿದರು.

ಭಾನುವಾರದಂದು ಬೆಳಗಾವಿ ಜಿಲ್ಲಾ ಸಹಕಾರ ಹಾಲು ಉತ್ಪಾದಕರ ಸಂಘಗಳ ಒಕ್ಕೂಟ ನಿಯಮಿತದಿಂದ ಚನ್ನಮ್ಮನ ಕಿತ್ತೂರಿನ ಹೂಲಿಕಟ್ಟಿ ಕ್ರಾಸ್‌ನಲ್ಲಿ 10 ಕೋಟಿ ರೂಪಾಯಿ ವೆಚ್ಚದಲ್ಲಿ ನಿರ್ಮಿಸಲಾಗುತ್ತಿರುವ ಹೂಲಿಕಟ್ಟಿ ಶೀಥಲಿಕರಣ ಕೇಂದ್ರದ ಶಂಕುಸ್ಥಾಪನೆ ನೆರವೇರಿಸಿ ಅವರು ಮಾತನಾಡಿದರು.

ನಂದಿನಿ ಹಾಲಿನ ದರ ಪರಿಷ್ಕರಣೆ ಹಣ ಸಂಪೂರ್ಣವಾಗಿ ರೈತರಿಗೆ ಸಂದಾಯವಾಗಲಿದೆ. ರಾಜ್ಯದ 16 ಜಿಲ್ಲಾ ಹಾಲು ಒಕ್ಕೂಟಗಳು, ಕೆಎಂಎಫ್ ಗೆ  ಹಾಲಿನ ದರ ಪರಿಷ್ಕರಿಸುವಂತೆ ಪ್ರಸ್ತಾವನೆ ಸಲ್ಲಿಸಿವೆ. ರೈತರ ಹೈನುಗಾರಿಕೆ ಹಿತದೃಷ್ಟಿಯಿಂದ ಹಾಲಿನ ದರ ಏರಿಕೆ ಮಾಡುವುದು ಅನಿವಾರ್ಯವಾಗಿದೆ. ಹಾಲಿನ ದರ ಪರಿಷ್ಕರಣೆ ಸಂಬಂಧ ಈಗಾಗಲೇ ಸಾಮಾನ್ಯಸಭೆಯಲ್ಲಿ ತೀರ್ಮಾನವನ್ನು ಕೈಗೊಳ್ಳಲಾಗಿದೆ ಎಂದರು.

ಹೂಲಿಕಟ್ಟಿ ಶೀಥಲೀಕರಣ ಕೇಂದ್ರಕ್ಕೆ ವೀರರಾಣಿ ಕಿತ್ತೂರು ಚನ್ನಮ್ಮನ ಹೆಸರು ನಾಮಕರಣ ಮಾಡಲಾಗುವುದು ಎಂದು ಭರವಸೆ ನೀಡಿದ ಅವರು, ಹೂಲಿಕಟ್ಟಿ ಶೀಥಲೀಕರಣ ಕೇಂದ್ರದ ೩೦ ಸಾವಿರ ಲೀಟರ್ ಹಾಲು ಶೇಖರಣೆ ಸಾಮರ್ಥ್ಯ ಹೊಂದಿದೆ. ೫ ಎಕರೆ ಜಾಗೆಯಲ್ಲಿ ೧೦ ಕೋಟಿ ವೆಚ್ಚದಲ್ಲಿ ಈ ಕೇಂದ್ರವನ್ನು ನಿರ್ಮಿಸಲಾಗುವುದು. ಇದಕ್ಕೆ ಕೆಎಂಎ್ ಮತ್ತು ಜಿಲ್ಲಾ ಹಾಲು ಒಕ್ಕೂಟದಿಂದ ತಲಾ ೫ ಕೋಟಿ ವೆಚ್ಚ ಭರಿಸಲಾಗಿದೆ. ಮುಂದಿನ ದಿನಗಳಲ್ಲಿ ಈ ಕೇಂದ್ರದಲ್ಲಿ ಹಾಲು ಶೇಖರಣೆ ಸಾಮರ್ಥ್ಯವನ್ನು ೬೦ ಸಾವಿರ ಲೀಟರ್‌ಗೆ ವಿಸ್ತರಿಸಲಾಗುವುದು. ಹಸು ಮತ್ತು ಎಮ್ಮೆ ಹಾಲನ್ನು ಪ್ರತ್ಯೇಕವಾಗಿ ಸ್ವೀಕರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದರು.


ಉತ್ತರ ಕರ್ನಾಟಕ ಭಾಗದ ರೈತರು ಹೈನುಗಾರಿಕೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಇದರಿಂದ ಆರ್ಥಿಕ ಅಭಿವೃದ್ಧಿ ಸಾಧ್ಯವಾಗುತ್ತದೆ. ರೈತರ ಹಿತಾಸಕ್ತಿಗೆ ಬದ್ಧರಾಗಿ ನಾವು ಕೆಲಸ ಮಾಡುತ್ತಿದ್ದೇವೆ. ರೈತರ ಅಭಿವೃದ್ಧಿಯೇ ನಮ್ಮ ಗುರಿ . ೪೦೦ ಕೋಟಿ ರೂಪಾಯಿ ಅಂದಾಜು ವೆಚ್ಚದಲ್ಲಿ ಬೆಳಗಾವಿಯಲ್ಲಿ ನಂದಿನಿ ಮಿಲ್ಕ್ ಪ್ಲಾಂಟ್ ನಿರ್ಮಿಸುವ ಯೋಜನೆಯಿದೆ. ಇದರಿಂದಾಗಿ ಐನೂರು ನಿರುದ್ಯೋಗಿ ಯುವಕರಿಗೆ ಉದ್ಯೋಗ ಸೃಷ್ಟಿಯಾಗಲಿದೆ. ಯುವಕರಿಗೆ ಉದ್ಯೋಗ ಸೃಷ್ಟಿ ಮಾಡುವುದರ ಜೊತೆಗೆ ಹೈನುಗಾರರ ಹಿತಕ್ಕೂ ನಾವು ಬದ್ಧರಾಗಿದ್ದೇವೆ. ದಕ್ಷಿಣ ಕರ್ನಾಟಕ ರೈತರು ಹೈನುಗಾರಿಕೆಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಉತ್ತರ  ಕರ್ನಾಟಕ ಭಾಗದಲ್ಲಿ ಕಬ್ಬು ಬೆಳೆಗೆ ರೈತರು ಹೆಚ್ಚು ಒತ್ತು ನೀಡಿದ್ದಾರೆ. ಇದರ ಜೊತೆಗೆ ಹೈನುಗಾರಿಕೆಗೂ ಒತ್ತು ನೀಡಬೇಕು. ಹೈನುಗಾರಿಕೆ ಉತ್ಪಾದನೆಯಲ್ಲಿ ದೇಶದಲ್ಲಿ ನಂ. ೧ಅಮೂಲ ಇದ್ದರೆ, ನಂ. ೨ರ ಸ್ಥಾನದಲ್ಲಿ ಕೆಎಂಎಫ್ ಇದೆ. ಕೆಎಂಎ್ ರೈತರ ಹಿತಾಸಕ್ತಿಗೆ ಬದ್ಧವಿದೆ. ಕೆಲವೊಂದು ಖಾಸಗಿ ಹಾಲು ಉತ್ಪಾದಕ ಸಂಘಗಳು ಇವೆ. ಅವುಗಳಿಗೆ ಆದ್ಯತೆ ನೀಡದೇ ಕೆಎಂಎಫ್ ಗೆ ಹೆಚ್ಚಿನ ಒತ್ತು ನೀಡಬೇಕು ಎಂದು ಮನವಿ ಮಾಡಿದರು.
ರಾಜ್ಯದಲ್ಲಿ ಒಟ್ಟು ೧೬ ಜಿಲ್ಲಾ ಹಾಲು ಒಕ್ಕೂಟಗಳಿದ್ದು, ೨೦ ಸಾವಿರ ಕೋಟಿ ವ್ಯವಹಾರ ಮಾಡುತ್ತಿವೆ.

ಮುಂದಿನ ದಿನಗಳಲ್ಲಿ ಇದನ್ನು ಹೆಚ್ಚಿಸಲಾಗುವುದು. ಲಾಭಾಂಶವನ್ನು ರೈತರಿಗೆ ನೀಡಲು ನಾವು ಬದ್ಧರಿದ್ದೇವೆ. ರೈತರೇ ನಮ್ಮ ಆಸ್ತಿಯಾಗಿದ್ದಾರೆ. ಹೂಲಿಕಟ್ಟಿಯಲ್ಲಿ ಹಾಲಿನ ಶಿಥೀಲಿಕರಣ ಮತ್ತು ಸಂಸ್ಕರಣ ಘಟಕ ಸ್ಥಾಪಿಸುವಂತೆ ೨೫ ವರ್ಷಗಳಿಂದ ಬೇಡಿಕೆ ಇತ್ತು. ಈ ಬೇಡಿಕೆಯನ್ನು ನನ್ನ ಅವಧಿಯಲ್ಲಿ ಈಡೇರಿಸುವ ಸೌ‘ಭಾಗ್ಯ ದೊರೆತಿರುವುದು ನನ್ನ ಪುಣ್ಯ. ನನ್ನ ಅವಧಿಯಲ್ಲಿ ಈ ಕೇಂದ್ರ ಸ್ಥಾಪನೆಯಾಗಿರುವುದು ನನಗೆ ಖುಷಿ ತಂದಿದೆ. ಇದರಿಂದಾಗಿ  ಬೈಲಹೊಂಗಲ, ಖಾನಾಪುರ ಮತ್ತು ಬೆಳಗಾವಿಗೆ ಅನುಕೂಲವಾಗಲಿದೆ. ಸಾಗಾಣಿಕೆ ವೆಚ್ಚ ಉಳಿಯಲಿದೆ. ಈ ‘ಭಾಗದಲ್ಲಿ ೭೫ ಸಹಕಾರಿ ಸಂಘಗಳಿವೆ. ೧೫೩೦೮ ಹಾಲಿನ ಸಂಗ್ರಹವಿದೆ. ಗುಣಮಟ್ಟ ಕಾಪಾಡಲು ಅನುಕೂಲವಾಗುತ್ತದೆ ಎಂದು ಬಾಲಚಂದ್ರ ಜಾರಕಿಹೊಳಿ ಹೇಳಿದರು.


ಕಾರ್ಯಕ್ರಮ ಉದ್ಘಾಟಿಸಿದ ಕಿತ್ತೂರಿನ ಶಾಸಕ ಮಹಾಂತೇಶ ದೊಡ್ಡಗೌಡರ, ಈ ಭಾಗದಲ್ಲಿ ಹಾಲು ಶೀಥಲಿಕರಣ ಕೇಂದ್ರ ಆರಂಭಿಸುವಂತೆ ಕಳೆದ ೨೫ ವರ್ಷಗಳಿಂದ ಬೇಡಿಕೆ ಇತ್ತು. ಈ ಬೇಡಿಕೆ ಈಡೇರಿಸಿದ ಕೆಎಂಎಫ್ ಅಧ್ಯಕ್ಷ ಬಾಲಚಂದ್ರ ಜಾರಕಿಹೊಳಿ ಅವರನ್ನು ಅಭಿನಂದಿಸಿದರು. ಕೆಎಂಎ್‌ಫ್ ಗೆ ಎಲ್ಲ ರೀತಿಯ ಸಹಕಾರ ನೀಡಲಾಗುವುದು ಎಂದು ಭರವಸೆ ನೀಡಿದರು. ದೇಶದಲ್ಲೇ ಎರಡನೇ ಅತೀ ಅಗ್ರ ಸಂಸ್ಥೆ ಕೆಎಂಎಫ್. ಇದಕ್ಕೆ ನಮ್ಮ ‘ಭಾಗದವರೇ ಅಧ್ಯಕ್ಷರಾಗಿರುವುದು ನಮ್ಮ ಹೆಮ್ಮೆ. ಅವರ ನೇತೃತ್ವದಲ್ಲಿ ಅಭಿವೃದ್ಧಿ ಸಾಧಿಸುತ್ತಿರುವುದು ಹೆಮ್ಮೆಯ ವಿಚಾರ ಎಂದರು.


ಕಿತ್ತೂರು ಕಲ್ಮಠದ ರಾಜಗುರು ಸಂಸ್ಥಾನ ಮಡಿವಾಳ ರಾಜಯೋಗಿಂದ್ರ ಸ್ವಾಮೀಜಿ, ನಿಚ್ಚಣಕಿ ಮಡಿವಾಳೇಶ್ವರ ಮಠದ ಪಂಚಾಕ್ಷರಿ ಸ್ವಾಮೀಜಿ, ನಯಾನಗರ ಪುಣ್ಯಾಶ್ರಮದ ಸುಖದೇವಾನಂದ ಸ್ವಾಮೀಜಿ, ಹೂಲಿಕಟ್ಟಿ ಹೊಸಕೇರಿ ಮಠದ ಲಿಂಗಾನಂದ ಸ್ವಾಮೀಜಿ ಸಾನ್ನಿಧ್ಯ ವಹಿಸಿದ್ದರು.


ಬೆಳಗಾವಿ ಜಿಲ್ಲಾ ಸಹಕಾರಿ ಹಾಲು ಒಕ್ಕೂಟ ನಿಯಮಿತದ ಅಧ್ಯಕ್ಷ ವಿವೇಕರಾವ್ ಪಾಟೀಲ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮುಖ್ಯ ಅತಿಥಿಯಾಗಿ ಕೆಎಂಎಫ್ ವ್ಯವಸ್ಥಾಪಕ ನಿರ್ದೇಶಕ ಬಿ.ಸಿ. ಸತೀಶ ,ಅಂಬಡಗಟ್ಟಿ ಗ್ರಾಮ ಪಂಚಾಯತ ಅಧ್ಯಕ್ಷ ಶ್ರೀಧರ ಅಕ್ಕಿ ಆಗಮಿಸಿದ್ದರು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕರಾದ ಬಾಬು ಕಟ್ಟಿ, ಡಾ.ಬಸವರಾಜ ಪರವಣ್ಣವರ , ಸೋಮಲಿಂಗಪ್ಪ ಮುಗಳಿ, ಉದಯಸಿಂಹ ಸಿಂಗ್, ಮಲ್ಲಪ್ಪ ಪಾಟೀಲ, ಕಲ್ಲಪ್ಪ ಗಿರೆಣ್ಣವರ,  ಅಪ್ಪಾಸಾಹೇಬ ಅವತಾಡೆ, ಬಾಬುರಾವ್ ವಾಘ್ಮೋಡೆ, ವಿರುಪಾಕ್ಷಿ ಈಟಿ, ರಾಯಪ್ಪ ಡೂಗ, ಪ್ರಕಾಶ ಅಂಭೋಜಿ, ಸುರೇಶ ಪಾಟೀಲ, ಸಂಗಪ್ಪ ಪವಡೆಪ್ಪನವರ, ಜಿಲ್ಲಾ ಸಹಕಾರಿ ಯೂನಿಯನ್ ಎಂಡಿ ಜಿ. ಶ್ರೀನಿವಾಸನ್ ಉಪಸ್ಥಿತರಿದ್ದರು. ಜಿಲ್ಲಾ ಹಾಲು ಒಕ್ಕೂಟದ ನಿರ್ದೇಶಕ ಡಾ.ಬಸವರಾಜ ಪರವಣ್ಣವರ ಸ್ವಾಗತಿಸಿದರು. ಶೃತಿ ಜಾಧವ ಕಾರ್ಯಕ್ರಮ ನಿರೂಪಿಸಿದರು.

Advertisement

Leave a reply

Your email address will not be published. Required fields are marked *

error: Content is protected !!