
ಮೂಢನಂಬಿಕೆಗೆ ಸೆಡ್ಡು ಹೊಡೆದ ಸಿಎಂ : ಬೊಮ್ಮಾಯಿಗೆ ರಾಣಿ ಚನ್ನಮ್ಮನ ಆಸರೆ

ಬೆಳಗಾವಿ: ಕಿತ್ತೂರು ಉತ್ಸವ ಉದ್ಘಾಟನೆ ಮಾಡಿದರೆ ಅಧಿಕಾರ ಕಳೆದುಕೊಳ್ಳುತ್ತಾರೆನ್ನುವ ಮೂಢನಂಬಿಕೆಯನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರು ಅಳಸಿ ಹಾಕಿದ್ದಾರೆ. ಕಳೆದ ಬಾರಿ ಉತ್ಸವ ಉದ್ಘಾಟನೆ ಮಾಡಿ ಮೌಡ್ಯಕ್ಕೆ ತೆರೆ ಎಳೆದಿದ್ದ ಬೊಮ್ಮಾಯಿ ಅವರು ಇದೀಗ ಇಂದು ಎರಡನೇ ಬಾರಿ ಉತ್ಸವಕ್ಕೆ ಚಾಲನೆ ನೀಡಿದ್ದಾರೆ. ಕಳೆದ ಉತ್ಸವ ಉದ್ಘಾಟಿಸಿ ಮಾತನಾಡಿದ್ದ ಅವರು. ಇಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕಾರ ಹೋಗುವುದೇ ಇದ್ದರೆ ಕಿತ್ತೂರು ರಾಣಿ ಚನ್ನಮ್ಮನ ಸಲುವಾಗಿ ಹೋಗಲಿ, ಸಂತೋಷ ಎಂದು ನುಡಿದಿದ್ದರು.

ರಾಜ್ಯದ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡಿದ್ದ ಬೊಮ್ಮಾಯಿ ಕಳೆದ ವರ್ಷ ನಡೆದ ಕಿತ್ತೂರು ಉತ್ಸವಕ್ಕೆ ಹಾಜರಾಗುವುದು ಅನುಮಾನ ಎಂದು ಹೇಳಲಾಗಿತ್ತು. ಈ ಅನುಮಾನಕ್ಕೆ ಕಾರಣ ಅಧಿಕಾರ ಕಳೆದುಕೊಳ್ಳುತ್ತಾರೆ ಎನ್ನುವ ಮೌಢ್ಯ. ಆದರೆ, ಇದ್ಯಾವುದಕ್ಕೂ ಕಿವಿಗೂಡದ ಸಿಎಂ, ಕಿತ್ತೂರಿಗೆ ಆಗಮಿಸಿ ಉತ್ಸವಕ್ಕೆ ವಿದ್ಯುಕ್ತವಾಗಿ ಚಾಲನೆ ನೀಡಿದರು. ಈ ವೇಳೆ ಮೌಢ್ಯದ ಕುರಿತು ಮಾತನಾಡಿದ್ದ ಅವರು, ಈ ಉತ್ಸವದಲ್ಲಿ ಪಾಲ್ಗೊಂಡಿದ್ದಕ್ಕೆ ಅಧಿಕಾರ ಹೋಗುವುದೇ ಇದ್ದರೆ ಕಿತ್ತೂರು ರಾಣಿ ಚನ್ನಮ್ಮನ ಸಲುವಾಗಿ ಹೋಗಲಿ, ಸಂತೋಷ ಎಂದು ನುಡಿದಿದ್ದರು.

ಚಾಮರಾಜನಗರಕ್ಕೆ ಹೋಗಬೇಡಿ ಅಂತಿದ್ದರು. ಅಲ್ಲಿಗೆ ಹೋಗಿದ್ದೇನೆ. ಕಿತ್ತೂರಿಗೆ ಬರಬೇಡಿ ಅಂತ ಹೇಳಿದ್ದರು, ಇಲ್ಲಿಗೂ ಬಂದಿದ್ದೇನೆ. ಇಲ್ಲಿ ಕಾಕತಾಳಿಯ, ಆಕಸ್ಮಿಕವಾಗಿ ಕೆಲವು ಘಟನೆಗಳು ನಡೆದಿರಬಹುದು. ಆದರೆ ಇಲ್ಲಿಗೆ ಬರದೇ ಇದ್ದರೂ ಶಾಶ್ವತವಾಗಿ ಅಧಿಕಾರದಲ್ಲಿ ಇರಲು ಸಾಧ್ಯವಿಲ್ಲ. ಅಧಿಕಾರ ಶಾಶ್ವತವಲ್ಲ ಎಂಬ ಕಾಲಾತೀತ ಸತ್ಯವನ್ನು ಅರ್ಥಮಾಡಿಕೊಳ್ಳಬೇಕು ಎನ್ನುವ ಮೂಲಕ ಮೌಢ್ಯಕ್ಕೆ ಸೆಡ್ಡು ಹೊಡೆದಿದ್ದರು.