Select Page

Advertisement

ತ್ರಿಲಿಂಗಗಳಿಂದ ತೆಲಂಗಾಣ-ಆಂಧ್ರಕ್ಕೆ ಚಾರಿತ್ರಿಕ ಮಹತ್ವ : ಶ್ರೀ ಕಾಶಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ತಪೋನುಷ್ಠಾನ

ತ್ರಿಲಿಂಗಗಳಿಂದ ತೆಲಂಗಾಣ-ಆಂಧ್ರಕ್ಕೆ ಚಾರಿತ್ರಿಕ ಮಹತ್ವ : ಶ್ರೀ ಕಾಶಿ ಜಗದ್ಗುರುಗಳ ಶ್ರಾವಣ ಮಾಸದ ಇಷ್ಟಲಿಂಗ ತಪೋನುಷ್ಠಾನ

ಹೈದ್ರಾಬಾದ : ಕೊಲ್ಲಿಪಾಕಿ ಕ್ಷೇತ್ರದ ಸೋಮೇಶ್ವರಲಿಂಗ, ಶ್ರೀಶೈಲ ಕ್ಷೇತ್ರದ ಮಲ್ಲಿಕಾರ್ಜುನಲಿಂಗ ಮತ್ತು ದ್ರಾಕ್ಷಾರಾಮ ಕ್ಷೇತ್ರದ ಭೀಮನಾಥಲಿಂಗಗಳು ಜಾಗೃತ ತ್ರಿಲಿಂಗಗಳಾಗಿವೆ. ಪ್ರಾಚೀನ ಕಾಲದಿಂದಲೂ ಅಖಂಡ ಆಂಧ್ರಪ್ರದೇಶವು ‘ತ್ರಿಲಿಂಗ ದೇಶ’ವೆಂದೇ ಪ್ರಸಿದ್ಧಿಯಾಗಿದ್ದು, ಈ ತ್ರಿಲಿಂಗಗಳಿಂದ ತೆಲಂಗಾಣ ಮತ್ತು ಆಂಧ್ರಪ್ರದೇಶಕ್ಕೆ ಚಾರಿತ್ರಿಕ ಮಹತ್ವ ಪ್ರಾಪ್ತವಾಗಿದೆ ಎಂದು ವೀರಶೈವ ಧರ್ಮದ ಪಂಚಪೀಠಗಳಲ್ಲಿ ಒಂದಾಗಿರುವ ಕಾಶಿ ಜ್ಞಾನ ಪೀಠದ ಹಿರಿಯ ಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಪ್ರತಿಪಾದಿಸಿದರು.

ಅವರು ಹೈದ್ರಾಬಾದ ನಗರದ ಬಲಕಂಪೇಟೆಯ ವೀರಶೈವ ಸೇವಾ ಸಮಾಜ ಸಂಘಟನೆ ಹಮ್ಮಿಕೊಂಡಿದ್ದ ಶ್ರಾವಣ ಮಾಸದ ಕಾರ್ಯಕ್ರಮದಲ್ಲಿ ಶುಕ್ರವಾರ ಸಾಮೂಹಿಕ ಇಷ್ಟಲಿಂಗ ಮಹಾಪೂಜೆ ನೆರವೇರಿಸಿ ಧರ್ಮ ಸಂದೇಶ ನೀಡಿ ಮಾತನಾಡುತ್ತಿದ್ದರು. ತೆಲಂಗಾಣ ಮತ್ತು ಆಂಧ್ರಪ್ರದೇಶ ರಾಜ್ಯಗಳ ಪ್ರಸಿದ್ಧವಾದ ತ್ರಿಲಿಂಗಗಳಿಂದಲೇ ಕ್ರಮವಾಗಿ

ರಂಭಾಪುರಿ ಪೀಠದ ಶ್ರೀಜಗದ್ಗುರು ರೇವಣಾರಾಧ್ಯರು, ಶ್ರೀಶೈಲ ಪೀಠದ ಶ್ರೀಜಗದ್ಗುರು ಪಂಡಿತಾರಾಧ್ಯರು ಮತ್ತು ಕೇದಾರ ಪೀಠದ ಶ್ರೀಜಗದ್ಗುರು ಏಕೋರಾಮಾರಾಧ್ಯರು ಪಾದುರ್ಭವಿಸಿದ್ದಾರೆ. ಜೊತೆಗೆ ಇಲ್ಲಿ ಅತ್ಯಧಿಕ ಸಂಖ್ಯೆಯಲ್ಲಿದ್ದ ವೀರಶೈವ-ಲಿಂಗಾಯತರು ತ್ರಿಲಿಂಗಗಳಾದ ಇಷ್ಟಲಿಂಗ, ಪ್ರಾಣಲಿಂಗ ಮತ್ತು ಭಾವಲಿಂಗಗಳನ್ನು ಬದ್ಧತೆಯಿಂದ ಅರ್ಚಿಸಿ ಆರಾಧಿಸುವವರಾಗಿದ್ದರೆಂದು ತಿಳಿದು ಬರುತ್ತದೆ ಎಂದರು.

ಶ್ರೀಕರ ಭಾಷ್ಯೆ-ಬಸವ ಪುರಾಣ : ವೀರಶೈವ ವಾಙ್ಮಯ ವಿಹಾರದ ಪ್ರಸಿದ್ಧ ಕೃತಿ ಶ್ರೀಸಿದ್ಧಾಂತ ಶಿಖಾಮಣಿಯಲ್ಲಿ ಶ್ರೀಶಿವಯೋಗಿ ಶಿವಾಚಾರ್ಯರು ‘ತ್ರಿಲಿಂಗ ದೇಶ’ದ ಉಲ್ಲೇಖಮಾಡಿದ್ದಾರೆ. ವೀರಶೈವ ಸಿದ್ಧಾಂತಕ್ಕೆ ಶ್ರೀಕರ ಭಾಷ್ಯೆ ಬರೆದ ಶ್ರೀಪತಿ ಪಂಡಿತಾರಾಧ್ಯರು ಹಾಗೂ ಮೊಟ್ಟ ಮೊದಲು ತೆಲಗು ಭಾಷೆಯಲ್ಲಿ ಬಸವ ಪುರಾಣ ಬರೆದ ಭೀಮಕವಿಗಳು ಇದೇ ತ್ರಿಲಿಂಗ ದೇಶದವರೆಂಬುದನ್ನು ಭಕ್ತಗಣ ಮರೆಯಬಾರದೆಂದು ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರು ಸ್ಪಷ್ಟಪಡಿಸಿದರು.

ಶ್ರಾವಣ ಮಹಾಪೂಜೆ : ಜು. 27 ರಂದು ರಾಯಚೋಟಿ ವೀರಭದ್ರನೇ ಲಿಂಗ ರೂಪದಲ್ಲಿರುವ ಸಂಗಾರೆಡ್ಡಿ ಜಿಲ್ಲೆಯ ಬಡಂಪೇಟ್ ಗ್ರಾಮದ ಪ್ರಾಚೀನ ರಾಚಣ್ಣ ದೇವಾಲಯದಲ್ಲಿ, ಜು.28 ರಂದು ಮಾರಳ್ಳಿ, ಜು.29 ಜೋಗಿಪೇಟ, ಜು.30 ನಾರಾಯಣ ಖೇಡ, ಜು.31 ಕಾಮರೆಡ್ಡಿ ಜಿಲ್ಲೆಯ ಬಾನ್ಸವಾಡ ಮತ್ತು ಬೋರ್ಲಂಗಳಲ್ಲಿ ಇಷ್ಟಲಿಂಗ ಮಹಾಪೂಜೆ ನೆರವೇರಿಸುವರು. ಆಗಷ್ಟ 1 ರಿಂದ 3 ರವರೆಗೆ ನಿಜಾಮಾಬಾದ ಜಿಲ್ಲೆಯ ಬೋಧನ ಮತ್ತು ಯಲ್ದುರ್ಕಿ

ಗ್ರಾಮಗಳಲ್ಲಿ ಹಾಗೂ ಆಗಸ್ಟ್ 4 ರಿಂದ 8 ರವರೆಗೆ ಸಂಗಾರೆಡ್ಡಿ ಜಿಲ್ಲೆಯ ಸದಾಶಿವಪೇಟ ನಗರದಲ್ಲಿ ಇಷ್ಟಲಿಂಗ ಮಹಾಪೂಜೆ ನಡೆಸಲಿದ್ದು, ಅಗಸ್ಟ್-8 ರಂದು ಅಲ್ಲಿಯ ಭಕ್ತಗಣವು ಶ್ರೀಜಗದ್ಗುರು ಡಾ.ಚಂದ್ರಶೇಖರ ಶಿವಾಚಾರ್ಯ ಭಗವತ್ಪಾದರ 79ನೆಯ ವರ್ಧಂತಿ ಮಹೋತ್ಸವವನ್ನೂ ಹಮ್ಮಿಕೊಂಡಿದೆ ಎಂದು ಕಾಶಿ ಪೀಠದ ಸಂಚಾಲಕ ಶಿವಾನಂದ ಹಿರೇಮಠ ಮಾಧ್ಯಮ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Advertisement

Leave a reply

Your email address will not be published. Required fields are marked *

error: Content is protected !!