
ಕೆಂಪವಾಡ : ಅರಿವಿನಿಂದ ಪಡೆದ ಜ್ಞಾನ ಇತರರಿಗೆ ಹಂಚಿ – ಡಾ. ಮಹಾಂತ ದೇವರು

ಕಾಗವಾಡ : ಅರಿವಿನ ಮೂಲಕ ತಾವು ಸಂಪಾದಿಸಿದ ಜ್ಞಾನವನ್ನು ಸಮಾಜದ ಒಳಿತಿಗೆ ಬಳಕೆ ಮಾಡಬೇಕು ಎಂದು ಶೇಗುಣಸಿ ವಿರಕ್ತಮಠದ ಡಾ. ಮಹಾಂತಪ್ರಭು ಸ್ವಾಮೀಜಿ ವಿದ್ಯಾರ್ಥಿಗಳಿಗೆ ಶುಭನುಡಿಗಳನ್ನಾಡಿದರು.
ಬೆಳಗಾವಿ ಜಿಲ್ಲೆಯ ಕಾಗವಾಡ ತಾಲ್ಲೂಕಿನ ಕೆಂಪವಾಡ ಗ್ರಾಮದಲ್ಲಿ ಗಜಾನನ ಶಿಕ್ಷಣ ಸಂಸ್ಥೆಯ ನ್ಯೂ ಹೈಸ್ಕೂಲ್ ನಲ್ಲಿ ಇಂದು ಹತ್ತನೆಯ ತರಗತಿಯ ವಿದ್ಯಾರ್ಥಿಗಳ ಬೀಳ್ಕೊಡುವ ಸಮಾರಂಭದ ದಿವ್ಯಸಾನಿಧ್ಯ ವಹಿಸಿ ಮಾತನಾಡಿದರು ಅವರು, ವಿದ್ಯಾರ್ಥಿಗಳು ಶಿಸ್ತು, ಸಮಯ ಪ್ರಜ್ಞೆ ಮತ್ತು
ಜೀವನದಲ್ಲಿ ಯಶಸ್ಸುಗಳಿಸಲು ಆತ್ಮವಿಶ್ವಾಸ ಬಹಳ ಪ್ರಾಮುಖ್ಯವೆಂದು ಕೆಲವು ನಿದರ್ಶನಗಳ ಮೂಲಕ ತಿಳಿ ಹೇಳಿದರು. ವಿದ್ಯಾರ್ಥಿಗಳು ತಮಗೆ ಸಿಗುವ ಅವಕಾಶಗಳನ್ನು ಶ್ರದ್ಧೆಯಿಂದ ಬಳಸಿಕೊಂಡು ಜೀವನದಲ್ಲಿ ಉನ್ನತ ಮಟ್ಟಕ್ಕೇರಲಿ ಮತ್ತು ಸಮಾಜ ಮತ್ತು ರಾಷ್ಟ್ರಕ್ಕೆ ಉತ್ತಮ ಕೊಡುಗೆಯಾಗಿ ಹೊರಹೊಮ್ಮಲಿ ಎಂದು ಹಾರೈಸಿದರು.
ಕಾರ್‍ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಗಜಾನನ ಶಿಕ್ಷಣ ಸಂಸ್ಥೆಯ ಅಧ್ಯಕ್ಷರಾದ ಕಲ್ಲಪ್ಪಾ ಹಟ್ಟಿಮನಿ ಮಾತನಾಡಿ ಆ ದಿನಗಳಲ್ಲಿ ಶಾಲೆಯ ನಿರ್ಮಾಣ ಎಲ್ಲರೂ ಶ್ರಮಿಸಿದ ದಿನಗಳ ಬಗ್ಗೆ ಮಕ್ಕಳಿಗೆ ವಿಸ್ತರಿಸಿದರು. ನಾಲ್ಕು ವಿದ್ಯಾರ್ಥಿಗಳ ಮೂಲಕ ಶುರುವಾದ ಶಾಲೆ ಇವತ್ತಿಗೆ ಮುನ್ನೂರು ಮಕ್ಕಳಿಗೆ ವಿದ್ಯಾಭ್ಯಾಸ ನೀಡುತ್ತಿದೆ ಎಂದು ಸಂತಸ ವ್ಯಕ್ತಪಡಿಸಿದರು.
ಕಾಲೇಜಿನ ಉಪನ್ಯಾಸಕರು ತಮ್ಮ ಹಿತನುಡಿಗಳ ಮೂಲಕ ವಿದ್ಯಾರ್ಥಿಗಳಿಗೆ ಶುಭಹಾರೈಸಿದರು. ಇನ್ನು ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯಮಾನ್ಯರು ದೀಪ ಪ್ರಜ್ವಲನೆ ಮೂಲಕ ಕಾರ್ಯಕ್ರಮ ಉದ್ಘಾಟಿಸಿದರು. ಬಳಿಕ ಕೆಲವು ವಿದ್ಯಾರ್ಥಿಗಳು ತಮ್ಮ ಅನಿಸಿಕೆ ವ್ಯಕ್ತಪಡಿಸಿದರು.
ಇನ್ನು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಹೆಸ್ಕಾಂ ಕಾರ್ಯನಿರ್ವಾಹಕ ಅಭಿಯಂತರರಾದ ಕಿರಣ ಸಣ್ಣಕ್ಕಿ, ಕಾಗವಾಡ ಕ್ಷೇತ್ರ ಶಿಕ್ಷಣಾಧಿಕಾರಿ ಎಂ ಆರ್ ಮುಂಜಿ, ಗ್ರಾಮ ಪಂಚಾಯಿತಿ ಅಧ್ಯಕ್ಷೆ ಅನ್ನಪೂರ್ಣ ಶೇಮಡೆ, ಹಿರಿಯ ವರದಿಗಾರರಾದ ಅಜೀತ ಸಣ್ಣಕ್ಕಿ, ಡಿಎಸ್ಎಸ್ ಜಿಲ್ಲಾ ಸಂಚಾಲಕ ಸಂಜಯ ತಳವಲಕರ, ರಾಜು ಚಿಗರೆ, ಹಣಮಂತ ತೇಲಿ ಸೇರಿದಂತೆ ಹಲವು ಗಣ್ಯರು ಉಪಸ್ಥಿತರಿದ್ದರು.
ಸಮಾರಂಭ ಉದ್ದೇಶಿಸಿ ಹಿಂದಿ ಶಿಕ್ಷಕಿ ವಿದ್ಯಾ ಸಣ್ಣಕ್ಕಿ ಶಾಲೆಯ ಬಗ್ಗೆ ವರದಿವಾಚನ ಹೇಳಿದರು, ಮುಖ್ಯೋಪಾಧ್ಯಾಯರಾದ ಸಿ ಎಂ ಭರಮವಡೆಯರ್ ಸ್ವಾಗತಿಸಿದರು, ಆರ್ ಎಂ ಕೋಷ್ಟಿ ನಿರೂಪಿಸಿದರು, ಎಸ್ ಎಲ್ ಚಿಕ್ಕೋಡಿ ವಂದಿಸಿದರು.