ಸಾಹುಕಾರ್ ವಿರುದ್ಧ ಸಿಡಿದೆದ್ದ ಕಡಾಡಿ : ವ್ಯಕ್ತಿ ತೆವಲಿಗೆ ಪಕ್ಷ ಮಣೆ ಹಾಕುವ ಅವಶ್ಯಕತೆ ಇಲ್ಲ ಎಂದು ಆಕ್ರೋಶ
ಬೆಳಗಾವಿ : ಶಾಸಕಿ ಲಕ್ಷ್ಮೀ ಹೆಬ್ಬಾಳ್ಕರ್ ವಿರುದ್ಧ ನೇರವಾಗಿ ಆರೋಪಿಸುವ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸ್ವಪಕ್ಷಿಯ ಸಂಸದ ಈರಣ್ಣ ಕಡಾಡಿ ಆಕ್ರೋಶ ಹೊರಹಾಕಿದ್ದಾರೆ.
ರಾಜಹಂಸಗಡ ಕೋಟೆಯಲ್ಲಿ ನಿರ್ಮಾಣವಾದ ಶಿವಾಜಿ ಮೂರ್ತಿ ಉದ್ಘಾಟನೆ ಹಿನ್ನಲೆ ಶಾಸಕಿ ಹೆಬ್ಬಾಳ್ಕರ್ ವಿರುದ್ಧ ಶಿಷ್ಟಾಚಾರ ಪಾಲಿಸದ ಆರೋಪ ಮಾಡಿದ್ದ ಶಾಸಕ ರಮೇಶ್ ಜಾರಕಿಹೊಳಿ ವಿರುದ್ಧ ಸಂಸದ ಈರಣ್ಣ ಕಡಾಡಿ ಸರಣಿ ಟ್ವಿಟ್ ಮಾಡುವ ಮೂಲಕ ಆಕ್ರೋಶ ಹೊರಹಾಕಿದ್ದಾರೆ.
ವಿರೋಧ ಪಕ್ಷದ ಶಾಸಕರೊಬ್ಬರು ಸರ್ಕಾರಿ ಕಾರ್ಯಕ್ರಮಗಳಲ್ಲಿ ಶಿಷ್ಟಾಚಾರ ಉಲ್ಲಂಘಿಸುತ್ತಿದ್ದಾರೆ ಎಂದು ಮಾತನಾಡುವ ನಮಗೆ ನಮ್ಮದೇ ಪಕ್ಷದ ಸ್ಥಳೀಯ ಸಂಸದರನ್ನು ಅದೇ ಸರ್ಕಾರಿ ಕಾರ್ಯಕ್ರಮಗಳಲ್ಲಿ ಜೊತೆಗೂಡಿಸಿಕೊಂಡು ಹೋಗದಿರುವ ನಮ್ಮ ಹೃದಯ ವೈಶಾಲ್ಯತೆಗೆ ಜನ ಏನಂದಾರು ಎಂಬ ಕನಿಷ್ಠ ಜ್ಞಾನವಿರಬೇಕು.
ನಮ್ಮ ಕುಟುಂಬದ ಸದಸ್ಯರು, ನಮ್ಮ ಕಚೇರಿ ಸಿಬ್ಬಂದಿಗಳು ಸರ್ಕಾರಿ ಯೋಜನೆಗಳ ಅಡಿಗಲ್ಲು, ಉದ್ಘಾಟನೆ ಮಾಡಬಹುದು ಆದರೆ ನಾನು ಹೋದಲೆಲ್ಲಾ ಪಕ್ಷ ಬದಲಾಯಿಸಿದಾಗ ನನ್ನ ಜೊತೆಗಿರುವ ನನ್ನ ಬೆಂಬಲಿಗರು ಚುನಾಯಿತ ಪ್ರತಿನಿಧಿಗಳಾಗಿದ್ದರೂ ಕೂಡ ಅವರಿಗೆ ಅವಕಾಶ ನೀಡದಿರುವ ನಮ್ಮ ಬಗ್ಗೆ ಜನ ಏನಂದಾರು ಎಂಬ ಕನಿಷ್ಠ ವಿವೇಚನೆ ನಮಗಿರಬೇಕು.
ಪರಿವಾರ ವಾದವನ್ನು ವಿರೋಧಿಸುವ ಮೌಲ್ಯಾಧಾರಿತ ಪಕ್ಷಕ್ಕೆ ನಾವೇ ಒಂದು ಕಳಂಕವಾಗಬಾರದು, ವ್ಯಕ್ತಿಯೊಬ್ಬರ ತೆವಲುಗಳಿಗೆ ಪಕ್ಷ ಕೂಡ ಮನೆ ಹಾಕುವ ಅಗತ್ಯವಿಲ್ಲ. ಇಂಥವರ ಪ್ರಜಾ ವಿರೋಧಿ ನೀತಿಗಳ ಬಗ್ಗೆ ಜಾಣ ಕುರುಡುತನ ತೋರುವ ನಮ್ಮ ನಾಯಕರು ಬಾರಿ ಬೆಲೆ ತೆರಬೇಕಾದಿತು ಎಂದು ಸಂಸದ ಈರಣ್ಣ ಕಡಾಡಿ ಟ್ವಿಟ್ಟರ್ ಮೂಲಕ ವಾಗ್ದಾಳಿ ನಡೆಸಿದ್ದಾರೆ.