ಜೈನಮುನಿ ಹತ್ಯೆ ಪ್ರಕರಣ ತನಿಖೆ ಚುರುಕು ; ಸಿಐಡಿ ಅಧಿಕಾರಿಗಳಿಂದ ಮಾಹಿತಿ ಕಲೆ
ಬೆಳಗಾವಿ : ಚಿಕ್ಕೋಡಿ ಹಿರೇಕೊಡಿ ನಂದಿ ಆಶ್ರಮದ ಜೈನಮುನಿ ಹತ್ಯೆ ಪ್ರಕರಣದ ತನಿಖೆ ಚುರುಕುಹೊಂಡಿದ್ದು, ಕಳೆದ 6 ದಿನಗಳಿಂದ ಸಿಐಡಿ ಅಧಿಕಾರಿಗಳು ಬೀಡು ಬಿಟ್ಟಿದ್ದು ಸಾಕ್ಷಿಗಳನ್ನು ಕಲೆ ಹಾಕುತ್ತಿದ್ದಾರೆ.
ಜೈನಮುನಿ ಹತ್ಯೆ ಪ್ರಕರಣವನ್ನು ರಾಜ್ಯ ಸರ್ಕಾರ ಸಿಐಡಿಗೆ ಒಪ್ಪಿಸಿತ್ತು. ಸಧ್ಯ ಸಿಐಡಿ ಐಜಿ ಪ್ರವೀಣ್ ಮದುಕರ್ ತಂಡದ ನೇತೃತ್ವದಲ್ಲಿ ಸಾಕ್ಷಿ ಸಂಗ್ರಹಿಸುವ ಕಾರ್ಯ ಮುಂದುವರಿದಿದೆ. ಜೊತೆಗೆ ಸ್ವಾಮೀಜಿ ಹಣಕಾಸಿನ ವ್ಯವಹಾರದ ಕುರಿತು ನಂದಿ ಪರ್ವತ ಆಶ್ರಮದ ಟ್ರಸ್ಟಿನ ಬ್ಯಾಂಕ್ ಅಕೌಂಟ್ ಗಳನ್ನು ಅಧಿಕಾರಿಗಳು ಪರಿಶೀಲನೆ ನಡೆಸಿದ್ದಾರೆ.
ಜೈನಮುನಿ ಹತ್ಯೆ ನಂತರ ಅವರ ಶರೀರವನ್ನು ತುಂಡರಿಸಿ ರಾಯಬಾಗದ ಕಟಕಬಾವಿ ಗ್ರಾಮದ ಕೊಳವೆ ಬಾವಿಗೆ ಎಸೆದಿದ್ದ ಪ್ರದೇಶದಲ್ಲಿ ಸಿಐಡಿ ಅಧಿಕಾರಿಗಳು ತೆರಳಿ ಪರಿಶೀಲನೆ ನಡೆಸಿದ್ದಾರೆ. ಜೊತೆಗೆ ಅನೇಕ ಸಾಕ್ಷಿಗಳನ್ನು ಎಫ್ಎಸ್ಎಲ್ ತಂಡ ಕಲೆ ಹಾಕಿದ್ದು, ಜೈನ ಮುನಿ ಪ್ರಕರಣದ ತನಿಖೆ ವೇಗ ಪಡೆದುಕೊಂಡಿದೆ.
ಡೈರಿ ವಿಚಾರವಾಗಿ ತನಿಖೆ ಚುರುಕು : ಕಾಮಕುಮಾರ ನಂದಿ ಮಹಾರಾಜರ ಹತ್ಯೆ ನಂತರ ಆರೋಪಿಗಳು ಸ್ವಾಮೀಜಿಯ ಡೈರಿಯನ್ನು ಸುಟ್ಟು ಹಾಕಿದ್ದರು ಎಂದು ಹೇಳಲಾಗಿತ್ತು. ಆದರೆ ಸಿಐಡಿ ಅಧಿಕಾರಿಗಳು ಈ ಕುರಿತು ಹೆಚ್ಚಿನ ಮಾಹಿತಿ ಕಲೆ ಹಾಕುತ್ತಿದ್ದು, ಈ ಡೈರಿಯಲ್ಲಿ ಇದೆ ಎನ್ನಲಾದ ಕೆಲ ಅನುಮಾನಿತ ಹೆಸರಿನವರನ್ನು ವಿಚಾರಣೆ ನಡೆಸಿದ್ದಾರೆ ಎಂದು ಹೇಳಾಗುತ್ತಿದೆ.
ಈಗಾಗಲೇ ಬೆಳಗಾವಿ ಪೊಲೀಸರು ನಡೆಸಿದ್ದ ತನಿಖೆಯ ಮಾಹಿತಿಯನ್ನು ಅಧಿಕಾರಿಗಳು ಪಡೆದುಕೊಂಡಿದ್ದಾರೆ. ಜೈನಮುನಿ ಹತ್ಯೆ ಪ್ರಕರಣ ಬೆಳಕಿಗೆ ಬಂದ ಕೇವಲ ನಾಲ್ಕು ಗಂಟೆಯಲ್ಲಿ ಆರೋಪಿಗಳನ್ನು ಹಿಡಿಯುವಲ್ಲಿ ಪೊಲೀಸರು ಯಶಸ್ವಿಯಾಗಿದ್ದರು.

