
ಯಡಿಯೂರಪ್ಪ ವಿರುದ್ಧ ಷಡ್ಯಂತ್ರ ನಡೆಸಿದರೆ ತಕ್ಕ ಫಲ : ಕಾಂಗ್ರೆಸ್ ವಿರುದ್ಧ ಶೆಟ್ಟರ್ ಗುಡುಗು

ಬೆಳಗಾವಿ : ಮಾಜಿ ಸಿಎಂ ಯಡಿಯೂರಪ್ಪ ವಿರುದ್ಧ ಮೂರು ತಿಂಗಳ ಹಿಂದೆ ಪ್ರಕರಣ ದಾಖಲಾದಾಗ ಇದೇ ಗೃಹ ಸಚಿವರು ಪ್ರಕರಣ ದಾಖಲಿಸಿದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು ಹೇಳಿಕೆ ನೀಡಿದ್ದರು. ಆದರೆ ಸರ್ಕಾರ ತಮ್ಮ ಆಡಳಿತ ವೈಫಲ್ಯ ಮುಚ್ಚಿಹಾಕಲು ಎರಡು ದಿನಗಳಲ್ಲಿ ತರಾತುರಿ ತನಿಖೆ ಮೂಲಕ ಬಂಧಿಸುವ ನಾಟಕ ಮಾಡಲಾಗುತ್ತಿದ್ದೆ ಎಂದು ಕಾಂಗ್ರೆಸ್ ವಿರುದ್ಧ ಜಗದೀಶ್ ಶೆಟ್ಟರ್ ಹರಿಹಾಯ್ದರು.
ಶುಕ್ರವಾರ ಬೆಳಗಾವಿ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಇವರು. ಯಡಿಯೂರಪ್ಪ ಅವರ ವಿರುದ್ಧ ಪ್ರಕರಣ ದಾಖಲಿಸಿದ್ದ ಮಹಿಳೆ ತೀರಿಹೋಗಿದ್ದಾರೆ. ಜೊತೆಗೆ ಆರೋಪ ಮಾಡಿದ್ದ ಮಹಿಳೆ ಈ ಹಿಂದೆ ಐವತ್ತಕ್ಕೂ ಅಧಿಕ ಜನರ ವಿರುದ್ಧ ಪ್ರಕರಣ ದಾಖಲಿಸಿದ್ದಾಳೆ. ಆದರೆ ಸರ್ಕಾರ ತಮ್ಮ ವೈಫಲ್ಯಗಳನ್ನು ಮುಚ್ಚಿ ಹಾಕುವ ಉದ್ದೇಶದಿಂದ ದೊಡ್ಡ ವ್ಯಕ್ತಿಗಳನ್ನು ಬಂಧಿಸುವ ನಾಟ ಆಡಿ ಜನರ ಗಮನ ಬೇರೆಡೆಗೆ ಸೆಳೆಯುವ ಕೆಲಸ ಮಾಡುತ್ತಿದೆ ಎಂದರು.
ಸಧ್ಯ ಕಾಂಗ್ರೆಸ್ ಸರ್ಕಾರದ ಸಚಿವ ಬಿ. ನಾಗೇಂದ್ರ ಭ್ರಷ್ಟಾಚಾರ ಆರೋಪದಲ್ಲಿ ರಾಜೀನಾಮೆ ನೀಡಿದ್ದಾರೆ. ರಾಹುಲ್ ಗಾಂಧಿ ವಿರುದ್ಧ ದಾಖಲಾದ ದೂರಿಗೆ ವಿರೋಧವಾಗಿ ಯಡಿಯೂರಪ್ಪ ವಿರುದ್ಧ ಕ್ರಮಕ್ಕೆ ಕಾಂಗ್ರೆಸ್ ಮುಂದಾಗಿದೆ. ಷಡ್ಯಂತ್ರ ನಡೆಸಿ ಯಡಿಯೂರಪ್ಪ ಅವರನ್ನು ಜೈಲಿಗೆ ಹಾಕಲು ಯತ್ನಿಸಿದರೆ ಇದರ ಫಲ ಅನುಭವಿಸಬೇಕಾಗುತ್ತದೆ ಎಂದು ಸರ್ಕಾರಕ್ಕೆ ಎಚ್ಚರಿಕೆ ನೀಡಿದರು.
ನೂತನ ಬೆಳಗಾವಿ ಸಂಸದರಾದ ನಂತರ ಮೊದಲಬಾರಿಗೆ ಜಿಲ್ಲೆಯ ವಿವಿಧ ಇಲಾಖೆಗಳ ಅಧಿಕಾರಿಗಳ ಜೊತೆ ಸಭೆ ನಡೆಸಿದ ಶೆಟ್ಟರ್ ಕೇಂದ್ರ ಅನುದಾನದ ಯೋಜನೆಗಳನ್ನು ತ್ವರಿತಗತಿಯಲ್ಲಿ ಮಾಡುವಂತೆ ನಿರ್ದೇಶನ ನೀಡಿದರು. ಈ ಸಂದರ್ಭದಲ್ಲಿ ಬೆಳಗಾವಿ – ಧಾರವಾಡ ರೈಲು ಮಾರ್ಗ ಕಾಮಗಾರಿ ಪ್ರಾರಂಭಕ್ಕೆ ಜಮೀನು ವಶಪಡಿಸಿಕೊಳ್ಳುವುದನ್ನು ತ್ವರಿತವಾಗಿ ಕೈಗೊಳ್ಳಬೇಕು ಎಂದು ಸೂಚನೆ ನೀಡಿದರು.