ಗೋಕಾಕ್ : ಸೆಲ್ಫಿ ಅವಾಂತರ, 140 ಅಡಿ ಕಂದಕಕ್ಕೆ ಬಿದ್ದು ಬದುಕುಳಿದ ಯುವಕ
ಬೆಳಗಾವಿ : ಜಿಲ್ಲೆಯ ಗೋಕಾಕ್ ಜಲಪಾತದಲ್ಲಿ ಪವಾಡ ಸದೃಶ್ಯ ಘಟನೆಯೊಂದು ನಡೆದಿದ್ದು, 140 ಅಡಿ ಕಂದಕಕ್ಕೆ ಬಿದ್ದ ಯುವಕನೋರ್ವ ಬದುಕುಳಿದ ಘಟನೆ ಶನಿವಾರ ನಡೆದಿದೆ.
ಕಲಬುರಗಿ ಜಿಲ್ಲೆಯ ಜೇವರ್ಗಿ ಮೂಲದ ಪ್ರದೀಪ್ ಸಾಗರ್ ಎಂಬ ಯುವಕ ಬೆಳಗಾವಿ ಖಾಸಗಿ ಬ್ಯಾಂಕ್ ನಲ್ಲಿ ಕೆಲಸ ಮಾಡುತ್ತಿದ್ದರು. ಶನಿವಾರ ರಜಾದಿನದ ಹಿನ್ನಲೆಯಲ್ಲಿ ಗೋಕಾಕ್ ಫಾಲ್ಸ್ ವೀಕ್ಷಣೆ ವೇಳೆ ಬಂಡೆಯ ತುದಿಗೆ ನಿಂತು ಸೆಲ್ಪಿ ಕ್ಲಿಕ್ಕಿಸುವ ಸಂದರ್ಭದಲ್ಲಿ ಆಯತಪ್ಪಿ ಕಂದಕಕ್ಕೆ ಬಿದ್ದಿದ್ದಾನೆ.
140 ಅಡಿ ಕಂದಕಕ್ಕೆ ಬಿದ್ದ ತಕ್ಷಣ ಪ್ರದೀಪ್ ಸ್ನೇಹಿತರು ಗೋಕಾಕ್ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ತಕ್ಷಣ ಅಗ್ನಿಶಾಮಕ ಸಿಬ್ಬಂದಿಗಳು ಹಾಗೂ ಪೊಲೀಸರು ರಾತ್ರಿಯವರೆಗೆ ಕಾರ್ಯಾಚರಣೆ ನಡೆಸಿದ್ದಾರೆ. ಕತ್ತಲಾದ ಹಿನ್ನಲೆಯಲ್ಲಿ ಯುವಕ ಮೃತಪಟ್ಟಿರಬೇಕೆಂದು ಸಿಬ್ಬಂದಿಗಳು ಹಾಗೂ ಗೆಳೆಯರು ಭಾವಿಸಿದ್ದರು.
ಆದರೆ ಬೆಳಗಿನ ನಾಲ್ಕು ಗಂಟೆ ವೇಳೆಗೆ ಕಂದಕಕ್ಕೆ ಬಿದ್ದ ಪ್ರದೀಪ್ ತನ್ನ ಮೋಬೈಲ್ ನಿಂದ ಗೆಳೆಯನಿಗೆ ಕರೆ ಮಾಡಿ ಮಾಹಿತಿ ನೀಡಿದ್ದಾನೆ. ಬಳಿಕ ಗೋಕಾಕ್ ಸಾಮಾಜಿಕ ಕಾರ್ಯಕರ್ತ ಆಯೂಬ್ ಖಾನ್‌ಗೆ ಕರೆ ಮಾಡಿದ್ದಾರೆ. ಈ ವೇಳೆ 140 ಅಡಿ ಆಳದ ಕಂದಕಕ್ಕೆ ತೆರಳಿದ ಆಯೂಬ್ ಖಾನ್, ಪೊಲೀಸರು ಹಾಗೂ ಅಗ್ನಿಶಾಮಕ ಸಿಬ್ಬಂದಿ ಪ್ರದೀಪ್ ಸಾಗರ್ ರಕ್ಷಿಸಿದ್ದಾರೆ. ಸದ್ಯ ಪ್ರದೀಪ್ ಸಾಗರ್ ಗೋಕಾಕ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ನೆರವಿಗೆ ದಾವಿಸಿದ ಆಯೂಬ್ ಖಾನ್‌ಗೆ ಪ್ರದೀಪ್ ಸಾಗರ್ ಪೋಷಕರು ಧನ್ಯವಾದ ತಿಳಿಸಿದ್ದಾರೆ.