
ಹಠ ಬಿಡದ ಡಿಕೆಶಿ ; ಗಾಂಧಿ ಭಾರತ ಯಶಸ್ವಿ

ಬೆಳಗಾವಿ : ದಿ. ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಮುಂದೂಡಿದ್ದ ಐತಿಹಾಸಿಕ ಗಾಂಧಿ ಭಾರತ ಕಾರ್ಯಕ್ರಮಕ್ಕೆ ಮಂಗಳವಾರ ಅದ್ಧೂರಿ ತೆರೆ ಬಿದ್ದಿದ್ದು ಲಕ್ಷಾಂತರ ಜನರನ್ನು ಒಗ್ಗೂಡಿಸುವ ಮೂಲಕ ಸಮಾವೇಶ ಯಶಸ್ವಿಯಾಗಿಸುವಲ್ಲಿ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಯಶಸ್ವಿಯಾಗಿದ್ದಾರೆ.
ಹೌದು ಮಹಾತ್ಮ ಗಾಂಧಿಜಿ 1924 ರಲ್ಲಿ ಬೆಳಗಾವಿಯಲ್ಲಿ ನಡೆದ ಕಾಂಗ್ರೆಸ್ ಅಧಿವೇಶನ ಅಧ್ಯಕ್ಷತೆ ವಹಿಸಿ ನೂರು ವರ್ಷ ಪೂರೈಸಿದ ಹಿನ್ನಲೆಯಲ್ಲಿ 2024 ರ ಡಿ. 26 ಹಾಗೂ 27 ರಂದು ಎರಡು ದಿನಗಳಕಾಲ ಗಾಂಧಿ ಭಾರತ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮದ ಮೊದಲ ದಿನ 1924 ರ ಕಾಂಗ್ರೆಸ್ ಅಧಿವೇಶನ ನಡೆದಿದ್ದ ವೀರಸೌಧದ ಆವರಣದಲ್ಲಿ ಕಾಂಗ್ರೆಸ್ ಕಾರ್ಯಕಾರಿ ಸಭೆ ನಡೆಯಿತು. ಈ ಸಂದರ್ಭದಲ್ಲಿ ದೇಶದ ನಾನಾ ಭಾಗಗಳಿಂದ ಸುಮಾರು 400 ಅಧಿಕ ಕಾಂಗ್ರೆಸ್ ಮುಖಂಡರು ಈ ಸಭೆಯಲ್ಲಿ ಭಾಗವಹಿಸಿದ್ದು ಕಾಂಗ್ರೆಸ್ ಪಾಲಿಗೆ ಐತಿಹಾಸಿಕ ಕ್ಷಣ.
ಡಿ. 26 ರ ರಾತ್ರಿ ಕಾಂಗ್ರೆಸ್ ಕಾರ್ಯಕಾರಿ ಸಭೆ ಮುಕ್ತಾಯವಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರ ಔತನಕೂಟಕ್ಕೆ ಇನ್ನೇನು ನಾಯಕರು ತೆರಳುವ ವೇಳೆಗೆ ಮಾಜಿ ಪ್ರಧಾನಿ ಹಾಗೂ ಆರ್ಥಿಕ ತಜ್ಞ ಡಾ. ಮನಮೋಹನ್ ಸಿಂಗ್ ಇನ್ನಿಲ್ಲ ಎಂಬ ಸುದ್ದಿ ಬರಸಿಡಿಲಿನಂತೆ ಬಂದಿತ್ತು. ಇತ್ತ ರಾಹುಲ್ ಗಾಂಧಿ ಸೇರಿದಂತೆ ಪ್ರಮುಖ ನಾಯಕರು ದೆಹಲಿಗೆ ತೆರಳಿದ್ದಲ್ಲದೆ ಡಿ. 27 ಕ್ಕೆ ನಡೆಯಬೇಕಿದ್ದ ಗಾಂಧಿ ಪ್ರತಿಮೆ ಲೋಕಾರ್ಪಣೆ ಹಾಗೂ ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮ ಮೊಟಕುಗೊಳಿಸಲಾಗಿತ್ತು.
ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಗಾಂಧಿ ಭಾರತ ಸಮಾವೇಶಕ್ಕೆ ಹಾಕಲಾಗಿದ್ದ ಲೈಟಿಂಗ್ ಗಳನ್ನು ತೆರವು ಮಾಡಿ ಮುಂದಿನ ದಿನಗಳಲ್ಲಿ ಕಾರ್ಯಕ್ರಮ ಆಯೋಜಿಸಲಾಗುತ್ತದೆ ಎಂದು ಸ್ವಂತ ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದರು. ಅದರಂತೆ ಗಾಂಧಿ ಭಾರತ ಹಿನ್ನಲೆಯಲ್ಲಿ ಮುಂದೂಡಿದ್ದ ಕಾರ್ಯಕ್ರಮಗಳು ಸೋಮವಾರ ಅತ್ಯಂತ ಅದ್ಧೂರಿಯಾಗಿ ಮುಕ್ತಾಯಗೊಂಡಿದ್ದು ವಿಶೇಷ.
ಲಕ್ಷಾಂತರ ಕಾಂಗ್ರೆಸ್ ಕಾರ್ಯಕರ್ತರು ಭಾಗಿ
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಸಮಾರಂಭಕ್ಕೆ ರಾಜ್ಯಾದ್ಯಂತ ಲಕ್ಷಾಂತರ ಜನ ಬೆಳಗಾವಿಗೆ ಆಗಮಿಸಿದ್ದರು. ನಗರದ ಸಿಪಿಎಡ್ ಮೈದಾನದಲ್ಲಿ ಹಾಕಲಾಗಿದ್ದ ಬೃಹತ್ ಪೆಂಡಾಲ್ ನಲ್ಲಿ ಈ ಕಾರ್ಯಕ್ರಮ ಜರುಗಿತು. ಬೀದರ್ ನಿಂದ ಹಿಡಿದು ಚಾಮರಾಜನಗರ ವರೆಗೂ ಜನ ಐತಿಹಾಸಿಕ ಸಮಾವೇಶ ಕಣ್ತುಂಬಿಕೊಳ್ಳುವ ಮೂಲಕ ಕಾಂಗ್ರೆಸ್ ಇತಿಹಾಸದಲ್ಲಿ ಈ ಸಮಾವೇಶ ಮತ್ತೊಂದು ಮೈಲುಗಲ್ಲು ರೂಪಿಸುವಲ್ಲಿ ಯಶಸ್ವಿಯಾಯಿತು.
ಕಾರ್ಯಕ್ರಮ ಯಶಸ್ಸಿಗೆ ಹಗಲಿರುಳು ಶ್ರಮಿಸಿದ ಡಿಕೆಶಿ
ಡಿ. 26 ಹಾಗೂ 27 ಕ್ಕೆ ನಿರ್ಧರಿಸಲಾಗಿದ್ದ ಗಾಂಧಿ ಭಾರತ ಸಮಾವೇಶಕ್ಕೆ ಸುಮಾರು ಹದಿನೈದು ದಿನ ಮುಂಚಿತವಾಗಿ ಸಿದ್ಧತೆ ಮಾಡಿಕೊಳ್ಳಲಾಗಿತ್ತು. ಬೆಳಗಾವಿ ನಗರದಾದ್ಯಂತ ಬಣ್ಣ, ಬಣ್ಣದ ಲೈಟಿಂಗ್ ಅಳವಡಿಕೆ ಮಾಡಿದ್ದರು. ಹಾಗೆಯೇ ಬೃಹತ್ ಪೆಂಡಾಲ್ ಹಾಕಲಾಗಿತ್ತು. ಆದರೆ ಡಾ. ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ ಕಾರ್ಯಕ್ರಮ ರದ್ದಾದರು ಧೃತಿಗೆಡದೆ ಡಿ.ಕೆ ಶಿವಕುಮಾರ್ ಎರಡನೇ ಬಾರಿಯೂ ಅಷ್ಟೇ ಅದ್ಧೂರಿಯಾಗಿ ಸಮಾವೇಶ ನಡೆಸಿದ್ದು ಡಿಕೆಶಿ ಪ್ರಯತ್ನಕ್ಕೆ ಹಿಡಿದ ಕನ್ನಡಿ.