ಬೆಳಗಾವಿ ನ್ಯಾಯಾಲಯ ಕಟಕಟೆಯಲ್ಲಿ ಮಾಜಿ ಐಪಿಎಸ್ ಅಧಿಕಾರಿ ಅಣ್ಣಾಮಲೈ, ಕಾರಣ ಏನು….?
ಬೆಳಗಾವಿ : ಅಂಕೋಲಾ ಉದ್ಯಮಿಯಾಗಿದ್ದ ಆರ್.ಎನ್. ನಾಯಕ ಕೊಲೆ ಪ್ರಕರಣದ ತನಿಖೆ ಮುಂದುವರಿದಿದ್ದು ಪ್ರಮುಖ ಆರೋಪಿಯಾಗಿದ್ದ ಬನ್ನಂಜೆ ರಾಜಾ ವಿರುದ್ಧ ಬೆಳಗಾವಿಯ ನ್ಯಾಯಾಲಯದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಹಾಗೂ ಬಿಜೆಪಿ ಮುಖಂಡ ಅಣ್ಣಾಮಲೈ ಸಾಕ್ಷ್ಯ ಹೇಳಿದ್ದಾರೆ.
ಈ ಹಿಂದೆ ನಡೆದಿದ್ದ ಉದ್ಯಮಿ ಆರ್.ಎನ್. ನಾಯಕ ಕೊಲೆ ಪ್ರಕರಣದ ತನಿಖಾಧಿಕಾರಿಯಾಗಿ ಕೆ. ಅಣ್ಣಾಮಲೈ ನಿಯೋಜಿತರಾಗಿದ್ದರು. ಈ ಪ್ರಕರಣ ಕುರಿತಂತೆ ಇಂದು ಬೆಳಗಾವಿಯ ಕರ್ನಾಟಕ ಸಂಘಟಿತ ಅಪರಾಧ ತಡೆ ಕಾಯ್ದೆ (ಕೋಕಾ) ನ್ಯಾಯಾಲಯದಲ್ಲಿ ನಡೆದ ತನಿಖೆಯಲ್ಲಿ ಬನ್ನಂಜೆ ರಾಜಾ ವಿರುದ್ಧ ಸಾಕ್ಷ್ಯ ಹೇಳಿದ್ದಾರೆ.
ಅಣ್ಣಾಮಲೈ ಜೊತೆಗೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎಡಿಜಿಪಿ ಪ್ರತಾಪ್ ರೆಡ್ಡಿ, ಭಾಸ್ಕರ್ ರಾವ್ ಕೂಡ ಕೋರ್ಟಿಗೆ ಹಾಜರಾಗಿ ಸಾಕ್ಷ್ಯ ನುಡಿದರು. ಆರ್.ಎನ್. ನಾಯಕ ಕೊಲೆ ಪ್ರಕರಣದಡಿ ಬನ್ನಂಜೆ ರಾಜಾ ಸೇರಿ 15 ಆರೋಪಿಗಳ ವಿರುದ್ಧ ಕೋಕಾ ಕೇಸ್ ದಾಖಲಾಗಿತ್ತು.
ಪ್ರಕರಣ ಸಂಬಂಧ ವಿದೇಶದಲ್ಲಿದ್ದ ಬನ್ನಂಜೆ ರಾಜಾನನ್ನು 2016 ಆಗಸ್ಟ್ ತಿಂಗಳಲ್ಲಿ ವಶಕ್ಕೆ ಪಡೆದಿದ್ದ ಪೊಲೀಸರು ಇಲ್ಲಿನ ಕೋಕಾ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ಬೆಳಗಾವಿಯ ಕೋಕಾ ನ್ಯಾಯಾಲಯದಲ್ಲಿ ಪ್ರಕರಣದ ವಿಚಾರಣೆ ಅಂತಿಮ ಹಂತಕ್ಕೆ ತಲುಪಿದೆ. ಇದು ರಾಜ್ಯದ ಮೊದಲನೇ ಕೊಕಾ ಪ್ರಕರಣವಾಗಿದೆ.