
ಡಿಕೆಶಿ & ಜಾರಕಿಹೊಳಿ ಮಧ್ಯೆ ಸಂಘರ್ಷ ; ಇಂದು ಬೆಳಗಾವಿಯಲ್ಲಿ ನಡೆಯುತ್ತಾ ಸಂಧಾನ…?

ಬೆಳಗಾವಿ : ಮುಖ್ಯಮಂತ್ರಿ ಬದಲಾವಣೆ ವಿಚಾರವಾಗಿ ಕಾಂಗ್ರೆಸ್ ನಲ್ಲಿ ನಾಯಕರ ನಡುವಿನ ಒಡಕು ಸಧ್ಯ ಜಾರಕಿಹೊಳಿ ಹಾಗೂ ಡಿಕೆಶಿ ನಡುವಿನ ಸಂಘರ್ಷಕ್ಕೆ ಕಾರಣವಾಗಿದೆ. ಇಬ್ಬರು ನಾಯಕರು ಬಹಿರಂಗ ಹೇಳಿಕೆ ನೀಡುತ್ತಿರುವುದು ಪಕ್ಷದ ಹೈಕಮಾಂಡ್ ಗೂ ತಲೆನೋವು ತರಿಸಿದೆ.
ಇಂದು ಬೆಳಗಾವಿಗೆ ರಣದೀಪ್ ಸಿಂಗ್ ಸುರ್ಜೇವಾಲ ಬರುತ್ತಿದ್ದು ಗಾಂಧಿ ಭಾರತ ಕಾರ್ಯಕ್ರಮದ ಪೂರ್ವಸಿದ್ಧತೆ ಸಭೆ ನಡೆಸಲಿದ್ದಾರೆ. ಈ ಸಂದರ್ಭದಲ್ಲಿ ಸಧ್ಯ ಡಿಕೆಶಿ ಹಾಗೂ ಸತೀಶ್ ಜಾರಕಿಹೊಳಿ ನಡುವೆ ಸಂಧಾನ ನಡೆಸುವ ಸಾಧ್ಯತೆ ದಟ್ಟವಾಗಿದೆ.
ಜೈ ಬಾಪು, ಜೈ ಭೀಮ್, ಜೈ ಸಂವಿಧಾನ ಕಾರ್ಯಕ್ರಮವನ್ನು ಕಳೆದ ಡಿ. 26 ಹಾಗೂ 27 ಕ್ಕೆ ಆಯೋಜನೆ ಮಾಡಲಾಗಿತ್ತು. ಆದರೆ ಡಿಸೆಂಬರ್ 26 ರ ರಾತ್ರಿ ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ನಿಧನದ ಹಿನ್ನಲೆಯಲ್ಲಿ 27 ಕ್ಕೆ ನಡೆಯಬೇಕಿದ್ದ ಕಾರ್ಯಕ್ರಮವನ್ನು ರದ್ದುಗೊಳಿಸಲಾಗಿತ್ತು. ಇದರ ಮುಂದುವರಿದ ಭಾಗವಾಗಿ ಬರುವ ಜ. 21 ಕ್ಕೆ ಬೃಹತ್ ಸಮಾವೇಶ ಆಯೋಜಿಸಲಾಗಿದೆ.
ಕಾರ್ಯಕ್ರಮದ ಪೂರ್ವತಯಾರಿ ಸಭೆ ನಡೆಸಲು ಇಂದು ಬೆಳಗಾವಿಗೆ ರಾಜ್ಯ ಕಾಂಗ್ರೆಸ್ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲ ಬರುತ್ತಿದ್ದು ಈ ನಡುವೆ ಸತೀಶ್ ಜಾರಕಿಹೊಳಿ ಹಾಗೂ ಡಿಸಿಎಂ ಡಿ.ಕೆ ಶಿವಕುಮಾರ್ ಹಾಜರಿರಲಿದ್ದಾರೆ. ಈ ಸಂದರ್ಭದಲ್ಲಿ ಇಬ್ಬರು ನಾಯಕರ ನಡುವಿನ ಒಡಕು ಸರಿಪಡಿಸುವ ಯತ್ನ ನಡೆಯಲಿದೆ ಎಂದು ಹೇಳಲಾಗುತ್ತಿದೆ.
ಈಗಾಗಲೇ ಸತೀಶ್ ಜಾರಕಿಹೊಳಿ ಬೆಳಗಾವಿಗೆ ಆಗಮಿಸಿದ್ದು, ಇಂದು ಡಿಕೆಶಿ, ಸುರ್ಜೇವಾಲ ಸೇರಿದಂತೆ ಅನೇಕ ನಾಯಕರ ಉಪಸ್ಥಿತಿ ಬರಲಿದ್ದಾರೆ. ಈ ಮಧ್ಯೆ ಸುರ್ಜೆವಾಲಾ ಉಭಯ ನಾಯಕರನ್ನು ಒಟ್ಟಿಗೆ ಸೇರಿಸಿ ಭಿನ್ನಾಭಿಪ್ರಾಯ ಸರಿ ಮಾಡಲಿದ್ದು ಇದು ಎಷ್ಟು ಸಕ್ಸಸ್ ಆಗುತ್ತದೆ ಎಂದು ಕಾದು ನೋಡಬೇಕು.