
ಶಾಸಕ ಅಭಯ ಪಾಟೀಲ್ ವಿರುದ್ಧ ಪ್ರಕರಣ ದಾಖಲಿಸಲು ನಿರ್ಧರಿಸಿದ ಕರವೇ

ಬೆಳಗಾವಿ : ರಾಜ್ಯ ಸರಕಾರದ ಅನುದಾನ ಉಪಯೋಗಿಸಿಕೊಂಡು ಕನ್ನಡ ನೆಲದಲ್ಲಿ ನಿರ್ಮಿಸಿದ ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆ ಕಾರ್ಯಕ್ರಮಕ್ಕೆ ಮಹಾರಾಷ್ಟ್ರದಿಂದ ಅತಿಥಿಯನ್ನು ಕರೆಯಿಸಿ
ನಾಡ ವಿರೋಧಿ ಘೋಷಣೆ ಕೂಗಿಸಲು ಸಹಕರಿಸಿದ ಬೆಳಗಾವಿ ದಕ್ಷಿಣ ಕ್ಷೇತ್ರದ ಶಾಸಕ ಅಭಯ್ ಪಾಟೀಲ್ ಪ್ರಕರಣ ದಾಖಲಿಸಲು ಕರವೇ ನಿರ್ಧರಿಸಿದೆ ಎಂದು ಬೆಳಗಾವಿ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಮಾಹಿತಿ ನೀಡಿದ್ದಾರೆ.
ಬೆಳಗಾವಿಯ ಅನಗೋಳದಲ್ಲಿ ಮಹಾನಗರ ಪಾಲಿಕೆಯ ಅನುದಾನದಲ್ಲಿ ಧರ್ಮವೀರ ಸಂಭಾಜಿ ಮಹಾರಾಜರ ಮೂರ್ತಿ ಅನಾವರಣ ಕಾರ್ಯಕ್ರಮಕ್ಕೆ ಬಂದಿದ್ದ ಛತ್ರಪತಿ ಶಿವಾಜಿ ಮಹಾರಾಜರ ವಂಶಸ್ಥರ ಶಿವೇಂದ್ರರಾಜೆ ಭೋಸಲೇ
ನಾಡ ವಿರೋಧಿ ಘೋಷಣೆ ಕೂಗಿದ್ದಾರೆ. ಈ ಕಾರ್ಯಕ್ರಮ ಆಯೋಜಿಸಿದ ಶಾಸಕ ಅಭಯ ಪಾಟೀಲ ಕನ್ನಡದ ನೆಲಕ್ಕೆ ಅಪಮಾನ ಮಾಡಿದ್ದಾರೆ. ಜಿಲ್ಲಾಡಳಿತದಿಂದ ಅಧಿಕೃತವಾಗಿ ಅನುಮತಿ ಪಡೆಯದೇ ಕಾರ್ಯಕ್ರಮ ನಡೆಸಿ ಪುಂಡಾಟ ಮೆರೆದಿದ್ದಾರೆ ಎಂದು ದೀಪಕ ಗುಡಗನಟ್ಟಿ ಆಕ್ರೋಶ ಹೊರಹಾಕಿದರು.
ಧರ್ಮವೀರ ಸಂಬಾಜಿ ಮಹಾರಾಜರ ಮೂರ್ತಿ ಉದ್ಘಾಟನೆಯ ಪರವಾಗಿ ಬಿಜೆಪಿ ಮುಖಂಡಾದ ಸಿ.ಟಿ ರವಿ ಹಾಗೂ ಅರವಿಂದ ಬೆಲ್ಲದ ಹೇಳಿಕೆ ಕೊಟ್ಟಿದ್ದರು. ಈಗ ಅದೇ ಕಾರ್ಯಕ್ರಮದಲ್ಲಿ ನಾಡ ವಿರೋಧಿ ಘೋಷಣೆ
ಕೂಗಿದ್ದು ಈ ಕುರಿತು ಉಭಯ ನಾಯಕರು ತಮ್ಮ ನಿಲುವು ಸ್ಪಷ್ಟಪಡಿಸಲಿ.
ಇಲ್ಲವಾದಲ್ಲಿ ನಾಡದ್ರೋಹಿ ಕೃತ್ಯಕ್ಕೆ ಅವಕಾಶ ಕಲ್ಪಿಸಿದ ಶಾಸಕ ಅಭಯ ಪಾಟೀಲ್ ಅವರನ್ನು ಬಿಜೆಪಿಯಿಂದ ಉಚ್ಛಾಟನೆ ಮಾಡಲಿ ಎಂದು ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿ ಮಹಾನಗರ ಪಾಲಿಕೆ ಕೇವಲ ಧರ್ಮವೀರ ಸಂಬಾಜಿ ಮಹಾರಾಜರ ಮತ್ತು ಛತ್ರಪತಿ ಶಿವಾಜಿ ಮಹಾರಾಜರ ಮೂರ್ತಿ ನಿರ್ಮಾಣಕ್ಕೆ ಅನುದಾನ ನೀಡುತ್ತಿದೆ. ನಮ್ಮ ನಾಡಿನ ಕಿತ್ತೂರು ರಾಣಿ ಚನ್ನಮ್ಮ, ಸಂಗೊಳ್ಳಿ ರಾಯಣ್ಣ,
ಹಾಗೂ ವಿಶ್ವಗುರು ಬಸವೇಶ್ವರ ವೃತ್ತ ಅಭಿವೃದ್ಧಿ ಕಡೆಗಣಿಸಿರುವ ಬೆಳಗಾವಿ ಮಹಾನಗರ ಪಾಲಿಕೆಯನ್ನು ಸರ್ಕಾರ ತಕ್ಷಣ ವಜಾ ಮಾಡಬೇಕು ಎಂದು ಕರವೇ ಜಿಲ್ಲಾಧ್ಯಕ್ಷ ದೀಪಕ ಗುಡಗನಟ್ಟಿ ಒತ್ತಾಯಿಸಿದ್ದಾರೆ.
ಬೆಳಗಾವಿ ದಕ್ಷಿಣ ಮತಕ್ಷೇತ್ರದಲ್ಲಿ ಬುಡಾದಿಂದ ಕೋಟ್ಯಾಂತರ ರೂ. ಖರ್ಚು ಮಾಡಿ ಶಿವಚರಿತ್ರೆ ಶಿವ ಸೃಷ್ಟಿಯನ್ನು ನಿರ್ಮಿಸಲಾಗಿತ್ತು. ಈಗ ಅದರ ಪರಿಸ್ಥಿತಿ ಏನಾಗಿದೆ ಎನ್ನುವದನ್ನು ಬೆಳಗಾವಿ ಜಿಲ್ಲಾಡಳಿತ ತನಿಖೆ ಮಾಡಬೇಕು.
ರಾಜಕೀಯ ಲಾಭಕ್ಕಾಗಿ ನಮ್ಮ ಅನುದಾನವನ್ನು ಖರ್ಚು ಮಾಡಿಸಿ ನಮ್ಮ ನೆಲಕ್ಕೆ ಅವಮಾನ ಮಾಡಿದ ಶಾಸಕ ಅಭಯ ಪಾಟೀಲ ವಿರುದ್ಧ ಹಾಗು ನಮ್ಮ ನೆಲದಲ್ಲಿ ನಾವು ನಿರ್ಮಿಸಿದ ಮೂರ್ತಿಯನ್ನು ಉದ್ಘಾಟಿಸಿ ನಮ್ಮ ವಿರುದ್ಧವೇ ಘೋಷಣೆ ಕೂಗಿದವರ ವಿರುದ್ಧ.
ಹಾಗೂ ಅವರನ್ನು ಆಹ್ವಾನಿಸಿದ ಇನ್ನಿತರ ವಿರುದ್ಧ ಕರವೇ ಬೆಳಗಾವಿಯ ತಿಲಕವಾಡಿ ಪೋಲೀಸ್ ಠಾಣೆಯಲ್ಲಿ ದೂರು ದಾಖಲಿಸಲಿದೆ ಎಂದು ದೀಪಕ ಗುಡಗನಟ್ಟಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.,