ಹಸು ದತ್ತು ಪಡೆದ ಬೆಳಗಾವಿ ಜಿಲ್ಲಾಧಿಕಾರಿ ನಿತೇಶ್ ಪಾಟೀಲ
ಬೆಳಗಾವಿ : ಪುಣ್ಯಕೋಟಿ ದತ್ತು ಯೋಜನೆಯಂತೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ಕೂಡ ಕೆ.ಕೆ.ಕೊಪ್ಪ ಬಳಿಯ ಮಹಾವೀರ ಗೋಶಾಲೆಯಲ್ಲಿ ಒಂದು ಹಸುವನ್ನು ದತ್ತು ಪಡೆದುಕೊಂಡಿದ್ದಾರೆ ಎಂದು ಉಪ ನಿರ್ದೆಶಕ ಡಾ.ರಾಜೀವ್ ಕೂಲೇರ ತಿಳಿಸಿದರು.
ಜಿಲ್ಲಾಧಿಕಾರಿಗಳು ಹಸು ದತ್ತು ಪಡೆಯುವ ಮೂಲಕ ಇತರರಿಗೂ ಸ್ಫೂರ್ತಿಯಾಗಿದ್ದಾರೆ. ಇದೇ ರೀತಿ ಸಾರ್ವಜನಿಕರು ಕೂಡ ಜಾನುವಾರುಗಳನ್ನು ದತ್ತು ಸ್ವೀಕರಿಸುವ ಮೂಲಕ ಪುಣ್ಯಕೋಟಿ ಯೋಜನೆಯನ್ನು ಯಶಸ್ವಿಗೊಳಿಸಬೇಕು ಎಂದು ಅವರು ಮನವಿ ಮಾಡಿಕೊಂಡರು.
ದೇಣಿಗೆ ನೀಡಲು ಅಥವಾ ದತ್ತು ಪಡೆಯಲು ಬಯಸುವವರು ಹೆಚ್ಚಿನ ಮಾಹಿತಿಗಾಗಿ https://punyakoti.karahvs.in ವೆಬ್ ಸೈಟ್ ವಿಳಾಸಕ್ಕೆ ಭೇಟಿ ನೀಡಬಹುದು ಎಂದು ಡಾ.ರಾಜೀವ ಕೂಲೇರ ಹೇಳಿದರು.
*********************
ಅಕ್ರಮ ಕಸಾಯಿಖಾನೆ ಬಂದ್ ಮಾಡಲು ಸೂಚನೆ
ನಗರದಲ್ಲಿ ಅಕ್ರಮವಾಗಿ ನಡೆಸಲಾಗುತ್ತಿರುವ ಕಸಾಯಿಖಾನೆಗಳನ್ನು ಕೂಡಲೇ ಬಂದ್ ಮಾಡಬೇಕು. ಒಂದು ವೇಳೆ ನಿಯಮಾವಳಿ ಪ್ರಕಾರ ಟ್ರೇಡ್ ಲೈಸೆನ್ಸ್ ನೀಡಲು ಸಾಧ್ಯವಿದ್ದರೆ ತಕ್ಷಣವೇ ಲೈಸೆನ್ಸ್ ನೀಡಬೇಕು ಎಂದು ಪಾಲಿಕೆಯ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಸೂಚನೆ ನೀಡಿದರು.
ಅದೇ ರೀತಿ ನಗರದ ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಟ್ರೇಡ್ ಲೈಸೆನ್ಸ್ ಪಡೆದುಕೊಳ್ಳಬೇಕು ಹಾಗೂ ನಿಯಮಗಳನ್ನು ಪಾಲಿಸಬೇಕು. ಒಂದು ವೇಳೆ ಲೈಸೆನ್ಸ್ ಇಲ್ಲದೇ ಮಾಂಸ ಮಾರಾಟ ಅಂಗಡಿಗಳು ಕಂಡುಬಂದರೆ ಅವುಗಳನ್ನು ಬಂದ್ ಮಾಡಿಸಬೇಕು ಎಂದು ತಿಳಿಸಿದರು.
ಈ ಬಗ್ಗೆ ಆಹಾರ ಸುರಕ್ಷತಾ ಅಧಿಕಾರಿಗಳ ಜತೆ ಜಂಟಿಯಾಗಿ ಪರಿಶೀಲನೆ ನಡೆಸಬೇಕು ಎಂದು ತಿಳಿಸಿದರು.
ಮಾಂಸ ಮಾರಾಟ ಅಂಗಡಿಗಳು ಕಡ್ಡಾಯವಾಗಿ ಪರದೆಗಳನ್ನು ಅಳವಡಿಸಬೇಕು. ನಿಯಮ ಉಲ್ಲಂಘಿಸುವವರಿಗೆ ದಂಡ ವಿಧಿಸಬೇಕು ಎಂದರು.
ಪುಣ್ಯಕೋಟಿ ದತ್ತು ಯೋಜನೆಯ ಕುರಿತು ಸಭೆಯಲ್ಲಿ ಮಾಹಿತಿಯನ್ನು ನೀಡಿದ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯ ಉಪ ನಿರ್ದೇಶಕ ಡಾ.ರಾಜೀವ ಕೂಲೆರ ಅವರು, “ಜಿಲ್ಲೆಯಲ್ಲಿ 13 ಗೋಶಾಲೆಗಳಿವೆ. ಹಸು ಸೇರಿದಂತೆ ಒಟ್ಟಾರೆ 1226 ಜಾನುವಾರುಗಳ ನೋಂದಣಿ ಮಾಡಲಾಗಿದೆ. ಪ್ರತಿ ಜಾನುವಾರಿನ ಚಿತ್ರ ಸಮೇತ ಸಂಪೂರ್ಣ ಮಾಹಿತಿ ಲಭ್ಯವಿರುತ್ತದೆ” ಎಂದು ತಿಳಿಸಿದರು.
ದತ್ತು ತೆಗೆದುಕೊಳ್ಳುವವರು ಗೋಶಾಲೆಗಳಿಂದ ಜಾನುವಾರು ದತ್ತು ಪಡೆದುಕೊಂಡು ಅದರ ನಿರ್ವಹಣಾ ವೆಚ್ಚವನ್ನು ದಾನಿಗಳು ಭರಿಸಬಹುದಾಗಿದೆ. ಮುಂಬರುವ ದಿನಗಳಲ್ಲಿ ಇನ್ನಷ್ಟು ಗೋಶಾಲೆಗಳನ್ನು ಈ ಯೋಜನೆಯ ವ್ಯಾಪ್ತಿಗೆ ಸೇರಿಸಲಾಗುವುದು ಎಂದು ತಿಳಿಸಿದರು.
ಜಿಲ್ಲೆಗೆ ಮತ್ತೇ ಐದು ಸರಕಾರಿ ಗೋಶಾಲೆಗಳು ಮಂಜೂರಾಗಿವೆ. ಇದಕ್ಕಾಗಿ ಈಗಾಗಲೇ ಕೆಲ ತಾಲ್ಲೂಕಿನಲ್ಲಿ ಜಾಗೆ ಮಂಜೂರು ಮಾಡಲಾಗಿದೆ ಎಂದು ಡಾ.ರಾಜೀವ್ ಹೇಳಿದರು.