
ಮತ್ತೊಮ್ಮೆ ಚುನಾವಣಾ ಸ್ಪರ್ಧೆಗೆ ಇಳಿಯಲಿರುವ ಡಿಸಿಎಂ ಡಿಕೆಶಿ….?

ಬೆಂಗಳೂರು : ಲೋಕಸಭಾ ಚುನಾವಣೆ ನಂತರ ಮತ್ತೊಂದು ಸುತ್ತಿನ ಚುನಾವಣಾ ಕಣಕ್ಕೆ ರಾಜಕೀಯ ಪಕ್ಷಗಳು ಸಿದ್ಧತೆ ನಡೆಸಿವೆ. ಈ ನಡುವೆ ಡಿಸಿಎಂ ಡಿ.ಕೆ ಶಿವಕುಮಾರ್ ಅವರೇ ಚುನಾವಣಾ ಅಖಾಡಕ್ಕೆ ಧುಮುಕುವ ಮೂಲಕ ಹೊಸ ಲೆಕ್ಕಾಚಾರ ಹೊಂದಿದ್ದಾರೆ ಎಂದು ಹೇಳಲಾಗುತ್ತಿದೆ.
ಹೌದು ಈ ಬಾರಿಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧೆ ಮಾಡಿದ್ದ ಮೂವರು ಮಾಜಿ ಮುಖ್ಯಮಂತ್ರಿಗಳು ಕಣಕ್ಕೆ ಇಳಿದಿದ್ದರು. ಬೆಳಗಾವಿಯಿಂದ ಜಗದೀಶ್ ಶೆಟ್ಟರ್, ಗದಗ – ಹಾವೇರಿ ಲೋಕಸಭಾ ಕ್ಷೇತ್ರದಿಂದ ಬಸವರಾಜ ಬೊಮ್ಮಾಯಿ ಹಾಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಹೆಚ್.ಡಿ ಕುಮಾರಸ್ವಾಮಿ ಗೆಲ್ಲುವ ಮೂಲಕ ರಾಜಕೀಯದ ಹೊಸ ಇನ್ನಿಂಗ್ಸ್ ಆರಂಭಿಸಿದ್ದಾರೆ.
ಸಧ್ಯ ಲೋಕಸಭಾ ಚುನಾವಣೆಯಲ್ಲಿ ಗೆದ್ದ ಮಾಜಿ ಸಿಎಂ ಕುಮಾರಸ್ವಾಮಿ ಈಗಾಗಲೇ ಮೋದಿ ಸಂಪುಟದಲ್ಲಿ ಸಚಿವರಾಗಿದ್ದಾರೆ. ವಿಧಾನಸಭೆಯಲ್ಲಿ ಚನ್ನಪಟ್ಟಣ ಕ್ಷೇತ್ರದಿಂದ ಗೆದ್ದು ಶಾಸಕರಾಗಿದ್ದ ಕುಮಾರಸ್ವಾಮಿ ತಮ್ಮ ಕ್ಷೇತ್ರಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ತೆರವಾದ ಸ್ಥಾನದ ಮೇಲೆ ಡಿ.ಕೆ ಬ್ರದರ್ ಕಣ್ಣಿಟ್ಡಿದ್ದು ಮತ್ತೊಂದು ಸುತ್ತಿನ ಯುದ್ದಕ್ಕೆ ಗೌಡರ ಕುಟುಂಬಗಳು ಸಜ್ಜಾಗಿವೆ.
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ಸ್ವತಃ ಡಿ.ಕೆ ಶಿವಕುಮಾರ್ ಕಣಕ್ಕೆ ಇಳಿಯಲಿದ್ದಾರೆ ಎಂದು ಸುದ್ದಿ ಎದ್ದಿದೆ. ಸಹೋದರ ಡಿ.ಕೆ ಸುರೇಶ್ ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸೋತ ನಂತರ ಡಿಕೆಶಿ ಸಹೋದರರಿಗೆ ಹಿನ್ನಡೆ ಆಗಿತ್ತು. ಸದ್ಯ ಈ ಸೋಲಿಗೆ ಪ್ರತ್ಯುತ್ತರ ನೀಡುವ ಉದ್ದೇಶದಿಂದ ಡಿಕೆಶಿ ಸ್ಪರ್ಧೆ ಕುರಿತು ಚರ್ಚೆ ನಡೆದಿವೆ.