ಮದುವೆ ಮಾಡಿಕೊಳ್ಳುವಂತೆ ಹೆತ್ತವರು ಮತ್ತು ಕುಟುಂಬಸ್ಥರು ನೀಡಿದ ವಿಪರೀತ ಮಾನಸಿಕ ಕಿರಿಕಿರಿಯಿಂದ ಬೇಸತ್ತ ಯುವತಿಯೊಬ್ಬಳು ನಡುಬೀದಿಯಲ್ಲೇ ತನ್ನ ತಲೆಯನ್ನು ಸಂಪೂರ್ಣವಾಗಿ ಬೋಳಿಸಿಕೊಂಡಿರುವ ಆಘಾತಕಾರಿ ಘಟನೆಯೊಂದು ತಡವಾಗಿ ಬೆಳಕಿಗೆ ಬಂದಿದೆ.

ಸದ್ಯ ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಸಿಕ್ಕಾಪಟ್ಟೆ ವೈರಲ್ (Viral news) ಆಗುತ್ತಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

ಹೆಣ್ಣುಮಕ್ಕಳಿಗೆ ಒಂದು ನಿರ್ದಿಷ್ಟ ವಯಸ್ಸು ಬರುತ್ತಿದ್ದಂತೆ ಮದುವೆ ಮಾಡಿ ಕಳುಹಿಸಬೇಕು ಎನ್ನುವುದು ಬಹುತೇಕ ಪೋಷಕರ ಆಸೆಯಾಗಿರುತ್ತದೆ. ಆದರೆ, ಇಲ್ಲೊಬ್ಬ ಯುವತಿಗೆ ಮದುವೆಯಾಗಲು ಇಷ್ಟವಿರಲಿಲ್ಲ ಎನ್ನಲಾಗಿದೆ. ಆದರೂ ಕುಟುಂಬಸ್ಥರು ಮದುವೆಯಾಗುವಂತೆ ನಿರಂತರವಾಗಿ ಒತ್ತಾಯ ಹೇರುತ್ತಿದ್ದರು. ಮನೆಯವರ ಈ ಕಿರುಕುಳ ಮತ್ತು ಒತ್ತಡವನ್ನು ತಡೆದುಕೊಳ್ಳಲು ಸಾಧ್ಯವಾಗದ ಯುವತಿ, ಅದಕ್ಕೆ ಪ್ರತಿರೋಧ ಒಡ್ಡಲು ಈ ವಿಭಿನ್ನ ಹಾಗೂ ತೀವ್ರ ಸ್ವರೂಪದ ನಿರ್ಧಾರಕ್ಕೆ ಮುಂದಾಗಿದ್ದಾಳೆ.

ಜನನಿಬಿಡ ರಸ್ತೆಯಲ್ಲೇ ಕುಳಿತು ಯುವತಿ ತನ್ನ ತಲೆಯನ್ನು ನುಣ್ಣಗೆ ಬೋಳಿಸಿಕೊಳ್ಳುತ್ತಿದ್ದರೂ, ಆಕೆಯ ತೀರ್ಮಾನವನ್ನು ಬದಲಾಯಿಸಲು ಯಾರಿಂದಲೂ ಸಾಧ್ಯವಾಗಿಲ್ಲ. ಈ ಇಡೀ ದೃಶ್ಯವನ್ನು ಅಲ್ಲಿದ್ದವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದು, ಸದ್ಯ ಇಂಟರ್ನೆಟ್‌ನಲ್ಲಿ ಈ ವಿಡಿಯೋ ಭಾರಿ ಸದ್ದು ಮಾಡುತ್ತಿದೆ. ಯುವತಿಯ ಈ ಪರಮಾವಧಿ ಹೆಜ್ಜೆಯನ್ನು ಕಂಡು ನೆಟ್ಟಿಗರು ಮಿಶ್ರ ಪ್ರತಿಕ್ರಿಯೆ ನೀಡುತ್ತಿದ್ದಾರೆ.

ಕೆಲವರು ಮನೆಯವರ ಮಿತಿಮೀರಿದ ಒತ್ತಡವೇ ಇದಕ್ಕೆ ಕಾರಣ ಎಂದು ಯುವತಿಯ ಪರ ಬ್ಯಾಟ್ ಬೀಸಿದರೆ, ಇನ್ನು ಕೆಲವರು ಪ್ರತಿಭಟಿಸಲು ಇಷ್ಟು ಕಠಿಣ ಮಾರ್ಗ ಆರಿಸಿಕೊಳ್ಳುವ ಅಗತ್ಯವಿರಲಿಲ್ಲ ಎಂದು ಅಭಿಪ್ರಾಯಪಟ್ಟಿದ್ದಾರೆ.