ಬೆಳಗಾವಿ : ಕಬ್ಬಿಗೆ ಗರಿಷ್ಠ ಬೆಂಬಲ ಬೆಲೆ ಘೋಷಣೆ ಸೇರಿದಂತೆ ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ರೈತ ಸಂಘಟನೆಗಳು ನಡೆಸುತ್ತಿರುವ ಪ್ರತಿಭಟನೆ ಕಿಚ್ಚು ಕರ್ನಾಟಕ ಹಾಗೂ ಮಹಾರಾಷ್ಟ್ರ ಗಡಿ ಭಾಗಗಳಲ್ಲಿ ವ್ಯಾಪಿಸಿದ್ದು ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಸಂಪೂರ್ಣ ಬಂದ್ ಮಾಡುವ ಮೂಲಕ ಕಬ್ಬು ಬೆಳೆಗಾರರು ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.

ರಾಜ್ಯ ರೈತ ಸಂಘಟನೆ ರಾಜ್ಯಾಧ್ಯಕ್ಷ ಚೂನಪ್ಪ ಪೂಜಾರಿ ಹಾಗೂ ಗೌರವಾಧ್ಯಕ್ಷ ಶಶಿಕಾಂತ ಗುರೂಜಿ ನೇತೃತ್ವದಲ್ಲಿ ಮಂಗಳವಾರ ಬೆಳಗಾವಿ ಜಿಲ್ಲೆಯ ಹುಕ್ಕೇರಿ ತಾಲೂಕಿನ ರಾಷ್ಟ್ರೀಯ ಹೆದ್ದಾರಿ ಹತ್ತರಗಿ ಟೋಲ್ ಹಾಗೂ ಹಿರೇಬಾಗೇವಾಡಿ ಟೋಲ್ ಸಂಪೂರ್ಣ ಬಂದ್ ಮಾಡಿ ಕೇಂದ್ರ ಸರಕಾರದ ವಿರುದ್ಧ ಸಾವಿರಾರು ರೈತರು ಆಕ್ರೋಶ ಹೊರಹಾಕಿದರು.‌ ಈ ವೇಳೆ ಮಹಾರಾಷ್ಟ್ರ, ಕರ್ನಾಟಕ ಹಾಗೂ ಗೋವಾ ಸಂಪರ್ಕಿಸುವ ರಸ್ತೆ ಬಂದ್ ಆದ ಹಿನ್ನೆಲೆಯಲ್ಲಿ ವಾಹನ ಸವಾರರು ಪರದಾಡುವ ಪರಿಸ್ಥಿತಿ ನಿರ್ಮಾಣವಾಗಿದೆ.

ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಹೊತ್ತು ಸೋಮವಾರ ದೆಹಲಿಗೆ ಹೋಗಿದ್ದ 35 ಕ್ಕೂ ಅಧಿಕ ರೈತ ಮುಖಂಡರು ಕೇಂದ್ರ ಸಚಿವರಾದ ಪ್ರಹ್ಲಾದ್ ಜೋಶಿ ಹಾಗೂ ಶಿವರಾಜ್ ಸಿಂಗ್ ಚೌಹಾನ್ ಜೊತೆ ಸಭೆ ನಡೆಸಿದರು. ಆದರೆ ಸಭೆಯಲ್ಲಿ ಕಬ್ಬಿಗೆ ಗರಿಷ್ಠ ಬೆಂಬಲ ಬೆಲೆ ಸೇರಿದಂತೆ ಯಾವುದೇ ನಿರ್ಧಾರ ಕೈಗೊಳ್ಳದ ಹಿನ್ನೆಲೆಯಲ್ಲಿ ಮಂಗಳವಾರ ರಾಜ್ಯ ರೈತ ಸಂಘಟನೆ ಪ್ರತಿಭಟನೆಗೆ ಕರೆ ನೀಡಿತ್ತು.

ಸಧ್ಯ ರೈತರ ಹೋರಾಟ ಎರಡನೇ ದಿನಕ್ಕೆ ಕಾಲಿಟ್ಟಿದ್ದು ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್ ಬಂದ್ ಆಗಿವೆ. ಸಧ್ಯ ಬೆಂಗಳೂರು – ಪುಣೆ ರಾಷ್ಟ್ರೀಯ ಹೆದ್ದಾರಿಯಲ್ಲಿ ಅಲ್ಲಲ್ಲಿ ತಡೆ ಇದ್ದು ಪೊಲೀಸ್ ಇಲಾಖೆ ಪರ್ಯಾಯ ವ್ಯವಸ್ಥೆ ಕಲ್ಪಿಸಿದ್ದು ಇದನ್ನು ವಾಹನ ಸವಾರರು ಗಮನಿಸಬೇಕಾಗಿದೆ.

**********

ನ್ಯಾಯ ಸಿಗದಿದ್ದರೆ ಉಗ್ರ ಹೋರಾಟದ ಎಚ್ಚರಿಕೆ : ಪ್ರತಿ ಟನ್ ಕಬ್ಬಿಗೆ 5,500 ರೂ. ಘೋಷಣೆ ಮಾಡಬೇಕು. ರಾಜ್ಯದ ಸಕ್ಕರೆ ಕಾರ್ಖಾನೆಗಳಿಂದ ಕೇಂದ್ರ ಸರಕಾರ ಎಥೆನಾಲ್ ಸಂಪೂರ್ಣವಾಗಿ ಖರೀದಿ ಮಾಡಬೇಕು. ಸಕ್ಕರೆಯ ಗರಿಷ್ಠ ಬೆಂಬಲ ಬೆಲೆಯನ್ನು 60 ಕ್ಕೆ ಏರಿಸಿ ವಾಣಿಜ್ಯ ಬಳಕೆಗೆ 100 ರೂ. ದರ ನಿಗದಿಪಡಿಸಿ ಕೂಡಲೇ ನಿರ್ಧಾರ ಕೈಗೊಳ್ಳಬೇಕು. ಇಲ್ಲವಾದರೆ ರೈತರ ಹೋರಾಟದ ಸ್ವರೂಪ ತೀವ್ರವಾಗುತ್ತದೆ ಎಂಬ ಎಚ್ಚರಿಕೆಯನ್ನು ರೈತ ಮುಖಂಡರು‌ ನೀಡಿದ್ದಾರೆ.

ಪಂಜಾಬ್ ಮಾದರಿ ಹೋರಾಟ : ರಾಜ್ಯದಿಂದ ಗೆಹಲಿಗೆ ರೈತರನ್ನು ಕರೆಸಿಕೊಂಡ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಯಾವುದೇ ನಿರ್ಧಾರ ಕೈಗೊಳ್ಳದೆ ಅವಮಾನ ಮಾಡಿದ್ದಾರೆ‌. ಕೂಡಲೇ ಕಬ್ಬು ಬೆಳೆಗಾರರ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಗರಿಷ್ಠ ಬೆಂಬಲ ಬೆಲೆ ಘೋಷಣೆ ಮಾಡಲಿ. ಒಂದುವೇಳೆ ಯಾವುದೇ ಕ್ರಮ ಕೈಗೊಳ್ಳದಿದ್ದರೆ ರಾಷ್ಟ್ರದಾದ್ಯಂತ ಹೋರಾಟ ನಡೆಸಲಾಗುತ್ತದೆ ಎಂದು ರಾಜ್ಯ ರೈತ ಸಂಘಟನೆ ಗೌರವಾಧ್ಯಕ್ಷ ಶಶಿಕಾಂತ ಪಡಸಲಗಿ ಆಕ್ರೋಶ ಹೊರಹಾಕಿದರು.‌

**********
ಮಹಾರಾಷ್ಟ್ರದಲ್ಲಿ ರಾಜು ಶೆಟ್ಟಿ ನೇತೃತ್ವದಲ್ಲಿ ಬೃಹತ್ ಪ್ರತಿಭಟನೆ : ಸಧ್ಯ ಕಬ್ಬು ಬೆಳೆಗಾರರ ಪ್ರತಿಭಟನೆ ಕಿಚ್ಚು ಕೇವಲ ಕರ್ನಾಟಕಕ್ಕೆ ಮಾತ್ರವಲ್ಲದೆ ಮಹಾರಾಷ್ಟ್ರದಲ್ಲಿಯೂ ವ್ಯಾಪಿಸಿದೆ. ರೈತ ನಾಯಕ ಹಾಗೂ ಮಾಜಿ ಸಂಸದ ರಾಜು ಶೆಟ್ಟಿ ನೇತೃತ್ವದಲ್ಲಿ ಕಬ್ಬು ಬೆಳೆಗಾರರು ತಮ್ಮ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ಪ್ರತಿಭಟನೆಗೆ ಇಳಿದಿದ್ದು ಗಡಿ ಭಾಗ ನಿಪ್ಪಾಣಿ ಸಮೀಪದ ರಾಷ್ಟ್ರೀಯ ಹೆದ್ದಾರಿಯ ಕುಗನೋಳಿ ಚಕ್ ಪೋಸ್ಟ್ ಬಂದ್ ಮಾಡಿ ಕೇಂದ್ರ ಸರಕಾರದ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ. ಕಬ್ಬು ಬೆಳೆಗಾರರಿಗೆ ನ್ಯಾಯ ಸಿಗುವವರೆಗೆ ಪ್ರತಿಭಟನೆ ವಾಪಸ್ ಪಡೆಯುವ ಪ್ರಶ್ನೆ ಇಲ್ಲ ಎಂದು ಹೇಳಿದ್ದಾರೆ.