ಬೆಂಗಳೂರು: ಕಳೆದ 18 ವರ್ಷಗಳಿಂದ ರಾಜ್ಯದ ಜನರಿಗೆ ತುರ್ತು ಸೇವೆ ನೀಡುತ್ತಿರುವ ‘ಆರೋಗ್ಯ ಕವಚ’ 108 ಆಂಬುಲೆನ್ಸ್(108 ambulance) ನೌಕರರು ತಮ್ಮ ನ್ಯಾಯಯುತ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ ಬೃಹತ್ ಮುಷ್ಕರಕ್ಕೆ(strike) ಕರೆ ನೀಡಿದ್ದಾರೆ. ಇದರಿಂದಾಗಿ ನಾಳೆಯಿಂದ ರಾಜ್ಯಾದ್ಯಂತ ತುರ್ತು ಆಂಬುಲೆನ್ಸ್ ಸೇವೆ ಸಂಪೂರ್ಣವಾಗಿ ಸ್ಥಗಿತಗೊಳ್ಳುವ ಗಂಭೀರ ಭೀತಿ ಎದುರಾಗಿದ್ದು, ರೋಗಿಗಳು ಹಾಗೂ ಸಾರ್ವಜನಿಕರಲ್ಲಿ ತೀವ್ರ ಆತಂಕ ಮೂಡಿಸಿದೆ.

ಮತ್ತೊಂದೆಡೆ, ನೌಕರರ ಈ ಮುಷ್ಕರದ ಬೆದರಿಕೆಗೆ ಸರ್ಕಾರ ಬಗ್ಗುವುದಿಲ್ಲ ಎಂದು ಆರೋಗ್ಯ ಸಚಿವ ಯು.ಟಿ. ಖಾದರ್ ಖಡಕ್ ಎಚ್ಚರಿಕೆ ನೀಡಿದ್ದು, ಸಾರ್ವಜನಿಕರು ಮುಂದಿನ ಕೆಲವು ದಿನಗಳವರೆಗೆ ಆಂಬುಲೆನ್ಸ್ ಸೇವೆಗೆ ಕಾಯದೆ ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವಂತೆ ಸಲಹೆ ನೀಡಿದ್ದಾರೆ.

ನಾಳೆ ರಾತ್ರಿ 10 ಗಂಟೆಯೊಳಗೆ ಬೇಡಿಕೆ ಈಡೇರಿಸದಿದ್ದರೆ ಮುಷ್ಕರ: ನೌಕರರ ಸಂಘ ಎಚ್ಚರಿಕೆ
ಕನಿಷ್ಠ ವೇತನ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಆಗ್ರಹಿಸಿ 108 ಆಂಬುಲೆನ್ಸ್ ಸಿಬ್ಬಂದಿ ಹೋರಾಟದ ಹಾದಿ ಹಿಡಿದಿದ್ದಾರೆ. ಸರ್ಕಾರದೊಂದಿಗೆ ಸಂಧಾನ ನಡೆಸಿ ಸಮಸ್ಯೆ ಬಗೆಹರಿಸಿಕೊಳ್ಳಲು ಇಂದು ರಾತ್ರಿ 10 ಗಂಟೆಯವರೆಗೆ ಗಡುವು ನೀಡಲಾಗಿದೆ. ಒಂದು ವೇಳೆ ಅಷ್ಟರೊಳಗೆ ಬೇಡಿಕೆ ಈಡೇರದಿದ್ದರೆ, ರಾತ್ರಿಯಿಂದಲೇ ರಾಜ್ಯಾದ್ಯಂತ ನೌಕರರೆಲ್ಲರೂ ಸಾಮೂಹಿಕ ರಜೆ ಹಾಕಿ ಕರ್ತವ್ಯ ಬಹಿಷ್ಕರಿಸಲಿದ್ದಾರೆ ಎಂದು 108 ಆಂಬುಲೆನ್ಸ್ ನೌಕರರ ಸಂಘದ ಅಧ್ಯಕ್ಷ ಚಂದ್ರಣ್ಣ ಎಚ್ಚರಿಕೆ ನೀಡಿದ್ದಾರೆ.

“ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಬಗ್ಗಲ್ಲ, ಪರ್ಯಾಯ ವ್ಯವಸ್ಥೆ ಬಳಸಿ”: ಸಚಿವ ಯು.ಟಿ. ಖಾದರ್
ನೌಕರರ ಮುಷ್ಕರದ ನಿರ್ಧಾರಕ್ಕೆ ತೀವ್ರವಾಗಿ ಪ್ರತಿಕ್ರಿಯಿಸಿರುವ ಆರೋಗ್ಯ ಸಚಿವ ಯು.ಟಿ. ಖಾದರ್, ಸಿಬ್ಬಂದಿಗಳ ವಿರುದ್ಧ ಕಠಿಣ ನಿಲುವು ತಾಳಿದ್ದಾರೆ.

“ಈ ವ್ಯವಸ್ಥೆಯನ್ನು ಸಂಪೂರ್ಣವಾಗಿ ಸರಿಪಡಿಸಲು ಹೊಸ ಟೆಂಡರ್ ಪ್ರಕ್ರಿಯೆ ಪ್ರಗತಿಯಲ್ಲಿದೆ. ಡಿಸೆಂಬರ್ ಅಂತ್ಯದ ವೇಳೆಗೆ ಎಲ್ಲ ಸಮಸ್ಯೆಗಳೂ ಬಗೆಹರಿಯಲಿವೆ, ಅಲ್ಲಿಯವರೆಗೆ ನಮಗೆ ಸಮಯಾವಕಾಶ ಕೊಡಿ ಎಂದು ಕೇಳಿದ್ದೇವೆ. ಆದರೆ ಇವರ ಈ ಬ್ಲ್ಯಾಕ್‌ಮೇಲ್ ತಂತ್ರಕ್ಕೆ ಸರ್ಕಾರ ಯಾವುದೇ ಕಾರಣಕ್ಕೂ ತಲೆಬಾಗುವುದಿಲ್ಲ. ಇದು ಜಿವಿಕೆ ಕಂಪನಿ ಹಾಗೂ ನೌಕರರ ನಡುವಿನ ಆಂತರಿಕ ವಿಚಾರ. ರೋಗಿಗಳಿಗೆ ತೊಂದರೆಯಾದರೆ ನೇರವಾಗಿ ಜಿವಿಕೆ ಸಂಸ್ಥೆಯ ಮೇಲೆಯೇ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವುದು” ಎಂದು ಸಚಿವರು ಸ್ಪಷ್ಟಪಡಿಸಿದರು.

ಮುಂದುವರಿದು ಮಾತನಾಡಿದ ಅವರು, “ಜನಸಾಮಾನ್ಯರು ಮುಂದಿನ ಒಂದೆರಡು ತಿಂಗಳು 108 ಆಂಬುಲೆನ್ಸ್ ಸೇವೆಯನ್ನು ಸಂಪೂರ್ಣವಾಗಿ ನಂಬಿಕೊಳ್ಳಬೇಡಿ. ಸದ್ಯ ಸರ್ಕಾರಿ ಆಸ್ಪತ್ರೆಗಳಲ್ಲಿಯೂ 1,000ಕ್ಕೂ ಅಧಿಕ ಆಂಬುಲೆನ್ಸ್‌ಗಳಿದ್ದು, ಸಾರ್ವಜನಿಕರು ಪರ್ಯಾಯ ವ್ಯವಸ್ಥೆಗಳನ್ನು ಬಳಸಿಕೊಳ್ಳಬೇಕು. ಸಿಬ್ಬಂದಿ ಇಲ್ಲದೆಯೂ ಸೇವೆಯನ್ನು ಹೇಗೆ ನಿರ್ವಹಿಸಬೇಕು ಎಂಬುದು ನಮಗೆ ತಿಳಿದಿದೆ” ಎಂದು ಖಡಕ್ ಸಂದೇಶ ರವʼಿಸಿದರು.

ಸದ್ಯ ಆರೋಗ್ಯ ಇಲಾಖೆ ಹಾಗೂ ಆಂಬುಲೆನ್ಸ್ ಸಿಬ್ಬಂದಿ ನಡುವಿನ ಈ ಹಗ್ಗಜಗ್ಗಾಟದಿಂದಾಗಿ ರಾಜ್ಯದಲ್ಲಿ ಆರೋಗ್ಯ ತುರ್ತು ಪರಿಸ್ಥಿತಿಯ ಆತಂಕ ಎದುರಾಗಿದೆ. ಈ ಬಿಕ್ಕಟ್ಟನ್ನು ಬಗೆಹರಿಸಲು ಸರ್ಕಾರ ನಾಳೆ ರಾತ್ರಿಯೊಳಗೆ ಯಾವ ಕ್ರಮ ಕೈಗೊಳ್ಳಲಿದೆ ಎಂಬುದನ್ನು ಕಾದು ನೋಡಬೇಕಿದೆ.