ಬೆಳಗಾವಿ : ಕಬ್ಬು ಬೆಳೆಗಾರರ ವಿವಿಧ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ರಾಜ್ಯ ರೈತ ಸಂಘಟನೆ ಕರೆ ನೀಡಿದ್ದ ರಾಷ್ಟ್ರೀಯ ಹೆದ್ದಾರಿ ತಡೆದು ಅಹೋರಾತ್ರಿ ಧರಣಿ ಸತ್ಯಾಗ್ರಹ ಕೈಬಿಟ್ಟಿದ್ದು ಅಸಂಖ್ಯಾತ ರೈತರು ಕೇಂದ್ರ ಸಚಿವ ಪ್ರಹ್ಲಾದ ಜೋಶಿ ಮನೆ ಮುತ್ತಿಗೆ ಹಾಕಲು ಬೆಳಗಾವಿಯಿಂದ ಹುಬ್ಬಳ್ಳಿ ವರೆಗೆ ಪಾದಯಾತ್ರೆ ಪ್ರಾರಂಭಿಸಿದ್ದಾರೆ.
ರೈತರ ಬೇಡಿಕೆ ಈಡೇರಿಸುವಂತೆ ಕೇಂದ್ರ ಸರಕಾರಕ್ಕೆ ಬುಧವಾರ ಸಂಜೆ ವರೆಗೆ ಗಡುವು ನೀಡಿದ್ದ ರೈತ ಸಂಘಟನೆ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿಯಲ್ಲಿ ಪ್ರತಿಭಟನೆ ಮುಂದುವರಿಸಿತ್ತು. ಕೇಂದ್ರದಿಂದ ರೈತರಿಗೆ ಯಾವುದೇ ಶುಭ ಸಂದೇಶ ಬರದ ಹಿನ್ನೆಲೆಯಲ್ಲಿ ತಾಳ್ಮೆ ಕಳೆದುಕೊಂಡ ರೈತರು ಹುಕ್ಕೇರಿ ತಾಲೂಕಿನ ಕತ್ತರಗಿ ಟೋಲ್ ಬಳಿ ನಡೆಸುತ್ತಿದ್ದ ಸತ್ಯಾಗ್ರಹ ಕೈಬಿಟ್ಟು ಹುಬ್ಬಳ್ಳಿ ವರೆಗೆ ಪಾದಯಾತ್ರೆ ಕೈಗೊಂಡರು.
ರೈತರ ಬೇಡಿಕೆಗೆ ಸ್ಪಂದಿಸದೆ ಕೇಂದ್ರ ಸಚಿವ ಪ್ರಹ್ಲಾದ ಜೋಶಿ ರೈತರಿಗೆ ಅನ್ಯಾಯ ಮಾಡಿದ್ದಾರೆ. ನಾವು ನ್ಯಾಯ ಕೇಳಲು ಸಚಿವರ ಮನೆಗೆ ತೆರಳುತ್ತಿದ್ದು ಅಲ್ಲಿಯೇ ಪರಿಹಾರ ನೀಡಲಿ ಎಂದು ರೈತ ಸಂಘಟನೆ ಆಕ್ರೋಶ ಹೊರಹಾಕಿದೆ.
ಸಧ್ಯ ರೈತರು ಹುಬ್ಬಳ್ಳಿ ಪಾದಯಾತ್ರೆ ಕೈಗೊಂಡ ಹಿನ್ನೆಲೆಯಲ್ಲಿ ಪುಣೆ – ಬೆಂಗಳೂರು ರಾಷ್ಟ್ರೀಯ ಹೆದ್ದಾರಿ ಕೂಗನೊಳ್ಳಿ ಚಕ್ ಪೋಸ್ಟ್, ಹತ್ತರಗಿ ಹಾಗೂ ಹಿರೇಬಾಗೇವಾಡಿ ಟೋಲ್ ನಲ್ಲಿ ನಡೆಸುತ್ತಿದ್ದ ರೈತರ ಧರಣಿ ಮೊಟಕುಗೊಂಡಿದೆ. ಕಳೆದ ಎರಡು ದಿನಗಳಿಂದ ಸ್ಥಗಿತಗೊಂಡಿದ್ದ ವಾಹನ ಸಂಚಾರ ಪ್ರಾರಂಭವಾಗಿದೆ.





