ಪಾಲಿಕೆ ಸದಸ್ಯರಲ್ಲಿ ಸಂಕ್ರಮಣದ ಸಂಭ್ರಮ ದುಪ್ಪಟ್ಟು : ಫೆ. 6 ಕ್ಕೆ ಮೇಯರ್, ಉಪಮೇಯರ್ ಚುನಾವಣೆ
ಬೆಳಗಾವಿ : ಕಳೆದ ಒಂದುವರೆ ವರ್ಷದಿಂದ ಬೆಳಗಾವಿ ಮಹಾನಗರ ಪಾಲಿಕೆಯ ಮೇಯರ್ ಹಾಗೂ ಉಪ ಮೇಯರ್ ಚುನಾವಣೆಗಾಗಿ ಜಾತಕ ಪಕ್ಷಿಯಂತೆ ಕಾಯುತ್ತಿದ್ದ ನಗರ ಸೇವಕರಿಗೆ ಸಧ್ಯ ಈ ಬಾರಿ ಸಂಕ್ರಮಣ ಹೊಸ ಹುರುಪು ನೀಡಿದೆ. ಬರುವ ಫೆಬ್ರವರಿ 6 ರಂದು ಬೆಳಗಾವಿ ಮಹಾನಗರ ಪಾಲಿಕೆಗೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು, ಈ ಕುರಿತು ಪ್ರಾದೇಶಿಕ ಆಯುಕ್ತರು ಶುಕ್ರವಾರ ಪ್ರಕಟಣೆ ಹೊರಡಿಸಿದ್ದಾರೆ.
21 ನೇ ಅವದಿ ಮೀಸಲಾತಿ ಆಧಾರದ ಮೇಲೆ ಮೇಯರ್ ಹಾಗೂ ಉಪ ಮೇಯರ್ ಚುನಾವಣೆ ನಡೆಯಲಿದ್ದು ಮೇಯರ್ “ಸಾಮಾನ್ಯ ಮಹಿಳೆ”ಹಾಗೂ ಉಪ ಮೇಯರ್ ಹಿಂದುಳಿದ ವರ್ಗ ಬ ಮಹಿಳೆಗೆ ಮೀಸಲಾತಿ ನೀಡಲಾಗಿದೆ. ರಾಜ್ಯದ ಎರಡನೇ ರಾಜಧಾನಿ ಎಂದೇ ಕರೆಯಲ್ಪಡುವ ಬೆಳಗಾವಿ ಮಹಾನಗರ ಪಾಲಿಕೆ ಚುಕ್ಕಾಣಿ ಹಿಡಿಯಲು ಸಧ್ಯ ಸಾಮಾನ್ಯ ಮಹಿಳೆಯರ ಪೈಕಿ 8 ಜನ ಮಹಿಳಾ ಸದಸ್ಯೆಯರಲ್ಲಿ ಪೈಪೋಟಿ ನಡೆದಿದೆ.
58 ಸದಸ್ಯ ಬಲದ ಬೆಳಗಾವಿ ಮಹಾನಗರ ಪಾಲಿಕೆಗೆ ನಡೆದಿದ್ದ ಚುನಾವಣೆ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿತ್ತು. ಒಟ್ಟು 35 ಸ್ಥಾನಗಳನ್ನು ಗೆಲ್ಲುವ ಮೂಲಕ ದಿಗ್ವಿಜಯ ಸಾಧಿಸಿತ್ತು. ಉಳಿದಂತೆ ಕಾಂಗ್ರೆಸ್ – 10 ಹಾಗೂ ಎಂಇಎಸ್ ಎಐಎಂಐಎಮ್ ಸೇರಿ ಪಕ್ಷೇತರರು 13 ಸ್ಥಾನ ಗೆದ್ದುಕೊಂಡಿದ್ದರು. ಹಾಗೆಯೇ ಇದೇ ಮೊದಲಬಾರಿಗೆ ಎಂಉಎಸ್ ಕಳಪೆ ಪ್ರದರ್ಶನ ತೋರಿ ಬೆಳಗಾವಿಯಲ್ಲಿ ತನ್ನ ಅಸ್ತಿತ್ವದ ಕುರಿತು ಅನುಮಾನ ಹುಟ್ಟುವಂತೆ ಮಾಡಿದ್ದು ಸುಳ್ಳಲ್ಲ.