ಕಾಂಗ್ರೆಸ್ ನಲ್ಲಿ ಮುಂದುವರಿದ ಅಸಮಾಧಾನ ; ನಾನು ಕ್ಷಮೆ ಕೇಳುವ ವ್ಯಕ್ತಿಯಲ್ಲ ಎಂದ ಶಾಸಕ
ಬೆಂಗಳೂರು : ಕಾಂಗ್ರೆಸ್ ಪಕ್ಷದಲ್ಲಿ ಸಧ್ಯ ಶಾಸಕರ ಅಸಮಾಧಾನ ಮುಂದುವರಿದಿದ್ದು, ಮೊನ್ನೆ ನಡೆದ ಶಾಸಕಾಂಗ ಪಕ್ಷದ ಸಭೆ ಬಳಿಕವೂ ಶಾಸಕರು ತಮ್ಮ ಆಕ್ರೋಶವನ್ನು ಹೊರ ಹಾಕುತ್ತಿದ್ದಾರೆ.
ಸಚಿವರ ವಿರುದ್ಧ ಅಸಮಾಧಾನ ಹೊಂದಿದ್ದ ಇಪ್ಪತ್ತು ಶಾಸಕರು ಮುಖ್ಯಮಂತ್ರಿಗಳಿಗೆ ಪತ್ರ ಬರೆದಿದ್ದರು. ಈ ನಂತರ ಸಿಎಂ ಸಿದ್ದರಾಮಯ್ಯ ಶಾಸಕಾಂಗ ಪಕ್ಷದ ಸಭೆ ಕರೆದು ಎಲ್ಲರನ್ನೂ ಸಮಾಧಾನ ಪಡಿಸುವ ಕೆಲಸ ಮಾಡಿದ್ದರು.
ಆದರೆ ಈ ಸಭೆ ವಿಚಾರವಾಗಿ ಮಾತನಾಡಿದ ಸಚಿವ ಜಿ. ಪರಮೇಶ್ವರ ಶಾಸಕ ಬಿ.ಆರ್ ಪಾಟೀಲ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಪತ್ರ ಬರೆದ ವಿಚಾರಚಾಗಿ ಕ್ಷಮೆ ಕೇಳಿದ್ದಾರೆ ಎಂದು ಹೇಳಿದ್ದರು. ಆದರೆ ಇದಕ್ಕೆ ಆಕ್ರೋಶ ಹೊರ ಹಾಕಿರುವ ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್ ಪಾಟೀಲ್ ನಾನು ಕ್ಷಮೆ ಕೇಳುವ ಹೇಡಿ ಅಲ್ಲ ಎಂದು ಹೇಳಿದ್ದಾರೆ.
ಈ ಕುರಿತು ಮಾತನಾಡಿರುವ ಶಾಸಕರು ನಮಗೆ ಕ್ಷೇತ್ರದ ಅಭಿವೃದ್ಧಿಗೆ ಹಣ ಕೊಡಬೇಕು ಎಂಬುದು ನಮ್ಮ ವಾದವಾಗಿದೆ. ನಾನು ಸಭೆಯಲ್ಲಿ ಕ್ಷಮೆ ಕೇಳಿಲ್ಲ. ಕ್ಷಮೆ ಕೇಳುವಂತಹ ಯಾವುದೇ ತಪ್ಪು ಮಾಡಿಲ್ಲ. ಸಭೆಯಲ್ಲಿ ಯಾರು ಕ್ಷಮೆ ಕೇಳಿದ್ದಾರೋ ನಮಗೆ ಗೊತ್ತಿಲ್ಲ. ನಮ್ಮ ಹಕ್ಕು ನಾವು ಕೇಳಿದ್ದೇವೆ . ಈ ಕುರಿತು ಸಿಎಂ ಜೊತೆ ಮಾತನಾಡಿದ್ದೇವೆ ಎಂದರು.


