ಬೆಳಗಾವಿಯಲ್ಲಿ ಇ-ಗ್ರಂಥಾಲಯ ಉದ್ಘಾಟನೆಗೊಳಿಸಿದ ಸಿಎಂ ಬೊಮ್ಮಾಯಿ
ಬೆಳಗಾವಿ : ನಗರದ ಶಹಾಪುರದ ಬ್ಯಾಂಕ್ ಆಫ್ ಇಂಡಿಯಾ ಸರ್ಕಲ್ ನಲ್ಲಿ ಶಿವಾಜಿ ಉದ್ಯಾನದ ಹತ್ತಿರವಿರುವ ರವೀಂದ್ರ ಕೌಶಿಕ್ ಇ-ಗ್ರಂಥಾಲಯವನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಉದ್ಘಾಟಿಸಿದರು.
2.5 ರೂ.ಕೋಟಿ ವೆಚ್ಚದಲ್ಲಿ ಗ್ರಂಥಾಲಯ ನಿರ್ಮಾಣ ಮಾಡಲಾಗಿದ್ದು,ಗ್ರಂಥಾಲಯದಲ್ಲಿ ಕನ್ನಡ,ಇಂಗ್ಲೀಷ್, ಹಿಂದಿ, ಮರಾಠಿ ಹಾಗೂ ಉರ್ದು ಸೇರಿದಂತೆ ಒಟ್ಟು 5 ಭಾಷೆಗಳ ಡಿಜಿಟಲ್ ಗ್ರಂಥಾಲಯ ಇದಾಗಿದೆ.
ಗ್ರಂಥಾಲಯದ ವಿಶೇಷತೆ : ರವೀಂದ್ರ ಕೌಶಿಕ್ ಗ್ರಂಥಾಲಯವು ಇಬ್ಬರು ಸಿಬ್ಬಂದಿ ಹಾಗೂ ಒಟ್ಟು 23 ಡೆಸ್ಕ್ ಟಾಪ್ ಕಂಪ್ಯೂಟರಗಳನ್ನು ಹೊಂದಿದ್ದು, ಮಕ್ಕಳಿಗಾಗಿ ಉಪಯೋಗಿಸಲು 5 ಯೋಗ್ಯವಾದ ಟ್ಯಾಬ್ಲೆಟ್ ಗಳನ್ನು ಹೊಂದಿದೆ. ಮುಂದೆ ಮಕ್ಕಳ ಆಸಕ್ತಿಯ ಮೇಲೆ ಟ್ಯಾಬ್ಲೆಟ್ ಗಳ ಸಂಖ್ಯೆಯನ್ನು ಹೆಚ್ಚಿಸಲಾಗುತ್ತದೆ.
ಗ್ರಂಥಾಲಯದಲ್ಲಿ 5000 ಪುಸ್ತಕಗಳು ಲಭ್ಯವಿದ್ದು, ಒಂದು ಪುಸ್ತಕದ ಪ್ರತಿಯನ್ನು ಅನಿಯಮಿತ ಸಂಖ್ಯೆಯ ಬಳಕೆದಾರರು ತಮ್ಮ ಮೊಬೈಲ್ ಅಥವಾ ಕಂಪ್ಯೂಟರ್ ನಲ್ಲಿ ಡೌನ್ಲೋಡ್ ಮಾಡಿಕೊಳ್ಳಬಹುದು.
ಬೆಳಗಾವಿ ಸ್ಮಾರ್ಟ್ ಸಿಟಿ E-Libray Application ಮೂಲಕ ಲೈಬ್ರರಿಯಲ್ಲಿ ದೊರಕುವ ಪುಸ್ತಕಗಳನ್ನು ನೋಡಬಹುದು ಹಾಗೂ ಒಂದು ಬಾರಿ 50-60 ರೂಪಾಯಿಗಳನ್ನು ನೀಡಿ ಚಂದಾದಾರರಾಗಿ ಪುಸ್ತಕಗಳನ್ನು ಓದಬಹುದಾಗಿದೆ.
ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಉಪಯೋಗವಾಗುವಂತಹ ಪುಸ್ತಕಗಳು, ಹಾಗೂ ಚಿಕ್ಕ ಮಕ್ಕಳ ಪುಸ್ತಕಗಳು ಕೃತಕ ಬುದ್ದಿ ಮತ್ತೆ ಉಪಯೋಗಿಸಿ ಮಾಡಿದಂತಹ ಪುಸ್ತಕಗಳು ಕೂಡ ಲಭ್ಯವಿವೆ. ಎಲ್ಲಾ ವಯಸ್ಕರಿಗೂ ಉಪಯೋಗವಾಗುವ ಪುಸ್ತಕಗಳು ಲಭ್ಯವಿದೆ.
ವೈಫೈ ಸೌಲಭ್ಯ : ಗ್ರಂಥಾಲಯದ ಸುತ್ತಲೂ 300 ಮೀಟರ್ ವ್ಯಾಪ್ತಿಯಲ್ಲಿ ವೈಫೈ ಬಳಸಿ ಪುಸ್ತಕಗಳನ್ನು ಓದಬಹುದು ಹಾಗೂ ವೈಫೈ ಸೌಲಭ್ಯ ಕೇವಲ ಪುಸ್ತಕಗಳನ್ನು ಓದಲು ಡೌನ್ಲೋಡ್ ಮಾಡಿಕೊಳ್ಳಲು ಮಾತ್ರ ಉಪಯೋಗಿಸಿ ಕೊಳ್ಳಬಹುದಾಗಿದೆ.
ಗ್ರಂಥಾಲಯವು 3 ಅಂತಸ್ತು ಹೊಂದಿದ್ದು, ಒಂದು ಬಾರಿಗೆ 60 ಜನ ಓದುಗರಿಗೆ ಅವಕಾಶ ಕಲ್ಪಿಸಲಾಗಿದೆ. ಈ ಕಾರ್ಯಕ್ರಮದಲ್ಲಿ ಸಚಿವ ಗೋವಿಂದ ಕಾರಜೋಳ, ಬೈರತಿ ಬಸವರಾಜ, ಉಮೇಶ್ ಕತ್ತಿ. ಮಾಜಿ ಡಿಸಿಎಂ ಲಕ್ಷ್ಮಣ ಸವದಿ, ಶಾಸಕ ಅಭಯ್ ಪಾಟೀಲ್, ಅನಿಲ್ ಬೆನಕೆ ಉಪಸ್ಥಿತರಿದ್ದರು.