ಬಿಗ್ ಬಾಸ್ ಮನೆಯಿಂದ ನೇರವಾಗಿ ಕೋರ್ಟ್ ಗೆ ಬಂದ ಚೈತ್ರಾ ಕುಂದಾಪುರ ; ಏನು ಕಾರಣ…?
ಬೆಂಗಳೂರು : ಕನ್ನಡ ಬಿಗ್ ಬಾಸ್ ಸ್ಪರ್ಧಿ ಚೈತ್ರ ಕುಂದಾಪುರ ಅವರು ಕಳೆದ 50 ದಿನಗಳಿಂದ ಆಟ ಆಡುತ್ತಿದ್ದಾರೆ. ಮೊನ್ನೆಯಷ್ಟೇ ಅನಾರೋಗ್ಯದಿಂದ ಮನೆಯಿಂದ ಹೊರ ಹೋಗಿದ್ದ ಇವರು ಸಧ್ಯ ಮತ್ತೊಂದು ಕಾರಣಕ್ಕೆ ಮನೆಯಿಂದ ಹೊರಬಂದಿದ್ದಾರೆ.
ಹೌದು ಕಳೆದ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಬೈಂದೂರಿನ ಉದ್ಯಮಿ ಗೋವಿಂದ ಬಾಬು ಪೂಜಾರಿಗೆ ಬಿಜೆಪಿ ಎಂಎಲ್‍ಎ ಟಿಕೆಟ್ ಕೊಡಿಸುವುದಾಗಿ ನಂಬಿಸಿ 5 ಕೋಟಿ ರೂ. ಪಡೆದು ವಂಚಿಸಿದ್ದರು ಎನ್ನುವ ಆರೋಪದಲ್ಲಿ ಚೈತ್ರಾ ಜೈಲು ಸೇರಿ ಆ ಬಳಿಕ ಜಾಮೀನು ಪಡೆದು ಆಚೆ ಬಂದಿದ್ದರು. ಈ ಪ್ರಕರಣ ರಾಜ್ಯದಲ್ಲಿ ಸದ್ದು ಮಾಡಿತ್ತು.
ಟಿಕೆಟ್ ವಂಚನೆ ಸಂಬಂಧ ಪ್ರಕರಣ ವಿಚಾರಣೆ ನಡೆಯುತ್ತಿದೆ. ಈ ಪ್ರಕರಣದಲ್ಲಿ ಚೈತ್ರಾ ಸೇರಿದಂತೆ ಶ್ರೀಕಾಂತ್, ಹಿರೇ ಹಡಗಲಿಯ ಹಾಲಸ್ವಾಮಿ ಮಠದ ಸ್ವಾಮೀಜಿಯ ಹೆಸರು ಕೂಡ ಕೇಳಿ ಬಂದಿತ್ತು.
ಇತ್ತೀಚೆಗೆ ವಿಚಾರಣೆಗೆ ಹಾಜರಾಗಬೇಕೆನ್ನುವ ವಾರೆಂಟ್ ಬಂದಿತ್ತು. ಈ ಕಾರಣದಿಂದ ಚೈತ್ರಾ ಅವರು ಬಿಗ್ ಬಾಸ್ ಮನೆಯಿಂದ ಚೈತ್ರಾ ಕುಂದಾಪುರ ಅವರ ನೇರವಾಗಿ ಕೋರ್ಟ್ ವಿಚಾರಣೆಗೆ ಹಾಜರಾಗಿದ್ದಾರೆ.
ಸದ್ಯ ವಿಚಾರಣೆಯನ್ನು ಕೋರ್ಟ್ ಜನವರಿ 13ಕ್ಕೆ ಮುಂದೂಡಿದೆ. ಚೈತ್ರಾ ಅವರು ವಿಚಾರಣೆ ವೇಳೆ ಯಾರೊಂದಿಗೂ ಮಾತನಾಡಿಲ್ಲ ಎನ್ನಲಾಗಿದ್ದು, ಅಲ್ಲಿಂದ ಅವರು ನೇರವಾಗಿ ಬಿಗ್ ಬಾಸ್ ಮನೆಗೆ ಹೋಗಲಿದ್ದಾರೆ ಎನ್ನಲಾಗಿದೆ.
ಕಳೆದ ಸೀಸನ್‌ನಲ್ಲಿ ಹುಲಿ ಉಗುರು ಧರಿಸಿದ್ದ ಕಾರಣಕ್ಕೆ ವರ್ತೂರು ಸಂತೋಷ್ ಅವರು ಜೈಲಿಗೆ ಹೋಗಿ ಕೆಲ ದಿನಗಳ ಬಳಿಕ ಬಿಗ್ ಬಾಸ್ ಮನೆಗೆ ಬಂದಿದ್ದರು.