ಕ್ಷಮೆ ಕೇಳದಿದ್ದರೆ ನಿನ್ನ ಹತ್ಯೆ ; ಸಿ.ಟಿ ರವಿಗೆ ಕೊಲೆ ಬೆದರಿಕೆ ಪತ್ರ..!
ಬೆಂಗಳೂರು : ಬೆಳಗಾವಿ ಚಳಿಗಾಲ ಅಧಿವೇಶನ ಸಂದರ್ಭದಲ್ಲಿ ಕಲಾಪದ ವೇಳೆ ಸಚಿವೆ ಲಕ್ಷ್ಮೀ ಹೆಬ್ಬಾಳಕರ್ ವಿರುದ್ಧ ಅಶ್ಲೀಲ ಪದ ಬಳಕೆ ಆರೋಪದ ಪ್ರಕರಣಕ್ಕೆ ಸಂಬಂಧಿಸಿದಂತೆ ಮಾಜಿ ಸಚಿವ ಸಿ.ಟಿ ರವಿಗೆ ಕೊಲೆ ಬೆದರಿಕೆ ಪತ್ರ ಬಂದಿದೆ
ಚಿಕ್ಕಮಗಳೂರಿನ ಬಸವನಹಳ್ಳಿಯ ಸಿ.ಟಿ ರವಿ ನಿವಾಸಕ್ಕೆ ಹತ್ಯೆ ಮಾಡುವ ಬೆದರಿಕೆ ಪತ್ರ ಬಂದಿದೆ. ಅಶ್ಲೀಲ ಪದಬಳಕೆ ಮಾಡಿರುವ ನೀವು ಹದಿನೈದು ದಿನಗಳಲ್ಲಿ ಬಹಿರಂಗವಾಗಿ ಕ್ಷಮೆ ಕೇಳಬೇಕು. ಇಲ್ಲವಾದರೆ ನಿಮ್ಮನ್ನು ಹತ್ಯೆ ಮಾಡುವುದಾಗಿ ಅನಾಮಧೇಯ ಪತ್ರ ಬಂದಿದೆ.
ಕೊಲೆ ಬೆದರಿಕೆ ಪತ್ರದಲ್ಲಿ ಸಿ.ಟಿ ರವಿ ಅವರ ಪುತ್ರ ಸೂರ್ಯನ ಹೆಸರನ್ನೂ ಉಲ್ಲೇಖ ಮಾಡಲಾಗಿದೆ ಎಂದು ತಿಳಿದುಬಂದಿದೆ. ಕಳೆದ ಡಿಸೆಂಬರ್ 19 ರ ಮಧ್ಯಾಹ್ನ ವಿಧಾನ ಪರಿಷತ್ ಕಪಾಲದ ಸಂದರ್ಭದಲ್ಲಿ ಸಿ.ಟಿ ರವಿ ಅಶ್ಲೀಲ ಪದಬಳಕೆ ಮಾಡಿದ್ದರ ನಂತರ ಅವಾಂತರ ಸೃಷ್ಟಿಯಾಗಿತ್ತು.
ಘಟನೆ ಕುರಿತು ಸಿ.ಟಿ ರವಿ ಅವರ ಪಿಎ ಚೇತನ್ ಎಂಬುವವರು ಬಸವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು ಮಾಡಿದ್ದಾರೆ. ಅಗತ್ಯವಿದ್ದರೆ ಸಿ.ಟಿ ರವಿಗೆ ಭದ್ರತೆ ನೀಡುವ ಕುರಿತು ಪೊಲೀಸರು ಚಿಂತನೆ ನಡೆಸಿದ್ದು, ಪ್ರಕರಣದ ತನಿಖೆ ಕೈಗೊಂಡಿದ್ದಾರೆ ಎಂದು ತಿಳಿದುಬಂದಿದೆ.