
ಬಾಗಪ್ಪ ಹರಿಜನ ಕೊಲೆ ನಂತರ ಆರೋಪಿಗಳು ಓಡಾಡಿದ್ದೆಲ್ಲಿ…? ಎಸ್ಪಿ ಹೇಳಿದ್ದೇನು..!

ವಿಜಯಪುರ : ಕುಖ್ಯಾತ ರೌಡಿ ಬಾಗಪ್ಪ ಹರಿಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ನಾಲ್ವರು ಆರೋಪಿ ಗಳನ್ನು ಹೆಡೆಮುರಿ ಕಟ್ಟುವಲ್ಲಿ ವಿಜಯಪುರ ಪೊಲೀಸರು ಯಶಸ್ವಿಯಾಗಿದಿದ್ದಾರೆ. ಕೇವಲ 24 ಗಂಟೆಯಲ್ಲಿ ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ.
ಬಾಗಪ್ಪ ಹರಿಜನ ಕೊಲೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಪ್ರಕಾಶ್ ಮೇಲಿನಕೇರಿ, ರಾಹುಲ್ ತಳಕೇರಿ, ಸುದೀಪ್ ಕಾಂಬಳೆ ಹಾಗೂ ಮಣಿಕಂಠ ಬೆನಕೊಪ್ಪ ಎಂಬುವವರನ್ನು ಬಂಧಿಸಲಾಗಿದೆ.
ಇದರಲ್ಲಿ ರಾಹುಲ್ ತಳಕೇರಿ ಹೊರತುಪಡಿಸಿ ಬಂಧಿತರಲ್ಲಿ ಯಾರೂ ಅಪರಾಧ ಹಿನ್ನಲೆ ಹೊಂದಿಲ್ಲ ಎಂದು ವಿಜಯಪುರ ಎಸ್ಪಿ ಲಕ್ಷ್ಮಣ ನಿಂಬರಗಿ ಹೇಳಿದ್ದಾರೆ.
ಬಾಗಪ್ಪ ಹರಿಜನನನ್ನು ಫೆ. 11 ರ ರಾತ್ರಿ ವಿಜಯಪುರದಲ್ಲಿ ಬರ್ಬರವಾಗಿ ಹತ್ಯೆ ಮಾಡಿ ಆರೋಪಿಗಳು ತಲೆಮರೆಸಿಕೊಂಡಿದ್ದರು. ಬಾಗಪ್ಪ ಹರಿಜನ್ ಕೊಲೆ ಪ್ರಕರಣದಲ್ಲಿ ಆರೋಪಿಗಳಾಗಿರುವ ಪಿಂಟ್ಯಾ ಅಲಿಯಾಸ್ ಪ್ರಕಾಶ್ ಮತ್ತು ಅವನ ಮೂವರು ಸಹಚರರು ಬಾಗಪ್ಪನ ಹತ್ಯೆಯ ನಂತರ ಕಾಡಲ್ಲೇ ಓಡಾಡಿಕೊಂಡಿದ್ದರು.
ಜಮಖಂಡಿ ಕಡೆ ಹೊರಡುವ ಸಿದ್ಧತೆಯಲ್ಲಿದ್ದಾಗ ಒಂದು ಖಚಿತ ಮಾಹಿತಿ ಮೇರೆಗೆ ತಮ್ಮ ಸಿಬ್ಬಂದಿ ಅವರನ್ನು ಇಟಗಿ ಕ್ರಾಸ್ ಬಳಿ ಬಂಧಿಸಿದರು ಎಂದು ವಿಜಯಪುರದ ಎಸ್ ಪಿ ಲಕ್ಷ್ಮಣ ನಿಂಬರ್ಗಿ ಹೇಳಿದರು.
ಪಿಂಟ್ಯಾ ಮತ್ತು ಬಾಗಪ್ಪ ಪರಸ್ಪರ ಅಪರಿಚರೇನಲ್ಲ, ಬಾಗಪ್ಪನ ಬಳಿ ಪಿಂಟ್ಯಾ ಕಾರು ಚಾಲಕನಾಗಿ ಕೆಲಸ ಮಾಡಿದ್ದಾನೆ. ಅರೋಪಿಯು ಬಾಗಪ್ಪನ ಚಲನವಲನಗಳ ಮೇಲೆ ಸದಾ ಕಣ್ಣಿಟ್ಟಿದ್ದ ಎಂದು ಪೊಲೀಸ್ ಅಧಿಕಾರಿ ಹೇಳಿದರು.