
ಅಥಣಿ : ನಡು ರಸ್ತೆಯಲ್ಲಿ ಪೊಲೀಸರಿಂದ ಯೋಧನ ಮೇಲೆ ಹಲ್ಲೆ ; ಕ್ಷಮೆಯಾಚನೆ…!

ಅಥಣಿ : ರಜೆ ಮೇಲೆ ಊರಿಗೆ ಬಂದಿದ್ದ ಯೋಧನ ಮೇಲೆ ಪೊಲೀಸರು ಹಲ್ಲೆ ನಡೆಸಿದ್ದು ನಂತರ ಯೋಧನ ಘಟನೆ ಅಥಣಿ ಪಟ್ಟಣದಲ್ಲಿ ಶುಕ್ರವಾರ ನಡೆದಿದೆ.
ಭಾರತೀಯ ಸೇನೆಯುಲ್ಲಿ ಸೆಕೆಂಡ್ ಪ್ಯಾರಾ ರೆಜ್ಮೆಂಟ್ ಕಮಾಂಡೋ ಆಗಿ ಕರ್ತವ್ಯ ನಿರ್ವಹಿಸುತ್ತಿರುವ ತಾಲೂಕಿನ ಶಿರಹಟ್ಟಿ ಗ್ರಾಮದ ಯೋಧ ಮಲ್ಲಿಕಾರ್ಜುನ ಪಾಟೀಲ್ ರಜೆ ಮೇಲೆ ಊರಿಗೆ ಬಂದಿದ್ದರು.
ಶುಕ್ರವಾರ ಕೆಲಸದ ನಿಮಿತ್ತ ಅಥಣಿಗೆ ಬಂದಿದ್ದು ಕೆಲಹೊತ್ತು ಸಹೋದರನ ಜೊತೆ ಹಲ್ಯಾಳ ಸರ್ಕಲ್ ನಲ್ಲಿ ಬೈಕ್ ಮೇಲೆ ನಿಂತಿದ್ದಾರೆ. ಈ ಸಂದರ್ಭದಲ್ಲಿ ಸ್ಥಳಕ್ಕೆ ಬಂದ ಪೊಲೀಸ್ ಪೇದೆ ಅವಾಚ್ಯ ಪದಗಳಿಂದ ನಿಂದಿಸಿದ್ದು ಮಾತ್ರವಲ್ಲದೆ ಹಲ್ಲೆ ನಡೆಸಿದ್ದಾರೆ.
ನಡು ರಸ್ತೆಯಲ್ಲೇ ನಾಲ್ಕಾರು ಪೋಲೀಸರು ಯೋಧನ ಮೇಲೆ ಹಲ್ಲೆ ನಡೆಸಿದ್ದು ಈ ವೀಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಯೋಧನ ಜೊತೆ ಪೊಲೀಸರು ನಡೆದುಕೊಂಡ ರೀತಿಗೆ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ತಾಲೂಕಿನ ಹಾಲಿ ಹಾಗೂ ಮಾಜಿ ಸೈನಿಕರು ಘಟನೆಯನ್ನು ಖಂಡಿಸಿದ್ದಾರೆ.
ಕ್ಷಮೆ ಕೇಳಿದ ಪೊಲೀಸರು : ಯೋಧನ ಮೇಲಿನ ಹಲ್ಲೆ ಘಟನೆಯನ್ನು ಖಂಡಿಸಿ ತಾಲೂಕಿನ ಮಾಜಿ ಸೈನಿಕರ ಸಂಘದ ವತಿಯಿಂದ ಅಥಣಿ ಪೊಲೀಸ್ ಠಾಣೆಯಲ್ಲಿ ಪ್ರತಿಭಟನೆ ಮಾಡಲಾಯಿತು. ಗೌರವದಿಂದ ಮಾತನಾಡಿ ಎಂದು ಹೇಳಿದ್ದಕ್ಕೆ ಅವಾಚ್ಯವಾಗಿ ಮಾತನಾಡಿ ಹಲ್ಲೆ ನಡೆಸಿದ್ದಾರೆ ಎಂದು ಆರೋಪಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತೆರಳುವುದನ್ನು ಅರಿತ ಅಥಣಿ ಠಾಣೆ ಪೊಲೀಸರು ಕ್ಷಮೆಯಾಚನೆ ಮಾಡಿದರು. ನಂತರ ಮಾಜಿ ಸೈನಿಕರ ಸಂಘಟನೆ ಸದಸ್ಯರು ಪ್ರತಿಭಟನೆ ವಾಪಸ್ ಪಡೆದಿದ್ದಾರೆ.