ಶಹಬ್ಬಾಷ್ ಎಸ್ಪಿ : ಕಳ್ಳಕಾಕರಿಗೆ ಲಕ್ಷ್ಮಣ ರೇಖೆ ಹಾಕಿದ ನಿಂಬರಗಿ
ಬೆಳಗಾವಿ : ಒಬ್ಬ ನಿಷ್ಠಾವಂತ ಅಧಿಕಾರಿ ಮನಸ್ಸು ಮಾಡಿದರೆ ಏನೆಲ್ಲಾ ಸಾಧನೆ ಮಾಡಬಹುದು ಹಾಗೂ ಈ ಸಮಾಜದಲ್ಲಿ ನಡೆಯುವ ಅನಾಚಾರಗಳನ್ನು ತಡೆಗಟ್ಟಬಹುದು ಎಂಬುದಕ್ಕೆ ಸ್ಪಷ್ಟ ನಿದರ್ಶನವೇ ಬೆಳಗಾವಿ ಪೊಲೀಸ್ ವರಿಷ್ಠಾಧಿಕಾರಿ ಲಕ್ಷ್ಮಣ ನಿಂಬರಗಿ ಹಾಗೂ ಜಿಲ್ಲಾ ಪೊಲೀಸ್ ತಂಡ.
ಹೌದು ಇಷ್ಟೆಲ್ಲಾ ಪೀಠಿಕೆ ಹಾಕಲು ಪ್ರಮುಖ ಕಾರಣ ಏನು ಅಂತಿರಾ. ಬೆಳಗಾವಿ ಪೊಲೀಸ್ ಇಲಾಖೆ ಸಾಧಿಸಿದ ಈ ಮಹತ್ವದ ಮೈಲಿಗಲ್ಲಿಗೆ ಜನಸಾಮಾನ್ಯರು ಸಲಾಂ ಹೊಡೆದಿದ್ದು, ನಮ್ಮ ರಕ್ಷಣೆಗೆ ನಿಂತ ಪೊಲೀಸ್ ಇಲಾಖೆ ಮೇಲೆ ಮತ್ತಷ್ಟು ಗೌರವ ಜಾಸ್ತಿಯಾಗಿದೆ ಎನ್ನುತ್ತಿದ್ದಾರೆ.
ಕಳೆದ 2020 ರಿಂದ 2021 ರ ಸಪ್ಟೆಂಬರ್ ವರೆಗೆ ಜಿಲ್ಲೆಯ ನಾನಾ ವಿವಿಧ ಪೊಲೀಸ್ ಠಾಣೆಯಲ್ಲಿ ದಾಖಲಾಗಿದ್ದ 206 ಕಳ್ಳತನ ಪ್ರಕರಣ ಬೇಧಿಸಿರುವ ಬೆಳಗಾವಿ ಜಿಲ್ಲಾ ಪೊಲೀಸ್ 8 ಕೋಟಿ ರೂ. ಅಧಿಕ ಮೊತ್ತದ ಹಣವನ್ನು ವಶಪಡಿಸಿಕೊಂಡಿದ್ದಾರೆ. ಜಿಲ್ಲಾ ಪೊಲೀಸರ ಈ ಭರ್ಜರಿ ಕಾರ್ಯಾಚರಣೆಗೆ ಕಳ್ಳ ಕಾಕರು ಬಾಲ ಮುದುಡಿಕೊಂಡು ಕಂಬಿ ಹಿಂದೆ ಹೋಗಿದ್ದರೆ, ಬೆಲೆ ಬಾಳುವ ವಸ್ತುಗಳನ್ನು ಕಳೆದುಕೊಂಡವರಿಗೆ ಎಸ್ಪಿ ಲಕ್ಷ್ಮಣ್ ನಿಂಬರಗಿ ವಾಪಸ್ ನೀಡಿದ್ದಾರೆ.
ಜಿಲ್ಲೆಯ ಅಥಣಿ, ಚಿಕ್ಕೋಡಿ, ರಾಯಬಾಗ, ಕುಡಚಿ ಸೇರಿದಂತೆ ವಿವಿಧ ಠಾಣೆಗಳಲ್ಲಿ ದಾಖಲಾಗಿದ್ದ ಕಳ್ಳತನ ಪ್ರಕರಣ ಬೆನ್ನು ಹತ್ತಿದ್ದ ಪೊಲೀಸರು ಬಾರಿ ಪ್ರಮಾಣದಲ್ಲಿ ಮೌಲ್ಯಯುತ ವಸ್ತುಗಳನ್ನು ವಶಪಡಿಸಿಕೊಂಡಿದ್ದರು. ಒಂದೇ ವರ್ಷದಲ್ಲಿ 8 ಕೋಟಿ ಮೌಲ್ಯದ ವಸ್ತು ವಶಪಡಿಸಿಕೊಂಡು ನೊಂದವರಿಗೆ ವಾಪಸ್ ನೀಡಲಾಗಿದೆ. 1 ಕೋಟಿ 32 ಲಕ್ಷ ಮೌಲ್ಯದ ಚಿನ್ನಾಭರಣ, 8 ಲಕ್ಷ 25 ಸಾವಿರ ಮೌಲ್ಯದ ಬೆಳ್ಳಿ ವಸ್ತು, 47 ಲಕ್ಷ ಮೌಲ್ಯದ ಬೈಕ್ ಗಳು , 4 ಕೋಟಿ ಮೊತ್ತದ 32 ನಾಲ್ಕು ಚಕ್ರದ ವಾಹನ, 3 ಲಕ್ಷ 55 ಸಾವಿರ ಮೌಲ್ಯದ ಮೊಬೈಲ್ ಪೋನ್ ಗಳನ್ನು ವಶಪಡಿಸಿಕೊಂಡಿದ್ದರು ಪೊಲೀಸರು.
ಪ್ರಮುಖವಾಗಿ ಇವತ್ತು ಎಸ್ಪಿ ಲಕ್ಷ್ಮಣ್ ನಿಂಬರಗಿ ನೇತೃತ್ವದಲ್ಲಿ ಭಾವನಾತ್ಮಕ ಕಾರ್ಯಕ್ರಮ ನಡೆಯಿತು. ಜನಸಾಮಾನ್ಯರು ಕಳೆದುಕೊಂಡಿದ್ದ ಮೌಲ್ಯಯುತ ವಸ್ತುಗಳನ್ನು ಹಿಂದಿರುಗಿಸಿದ ಪೊಲೀಸ್ ಇಲಾಖೆಗೆ ನೊಂದವರು ಶರಣೆಂದರು. ಇನ್ಯಾವುದೇ ಕಾರಣಕ್ಕೆ ನಮ್ಮ ವಸ್ತುಗಳು ವಾಪಸ್ ಬರಲು ಸಾಧ್ಯವಿಲ್ಲ ಎಂದುಕೊಂಡಿದ್ದವರು ಇಂದು ಸಂತೃಪ್ತ ಭಾವದಿಂದ ಎಸ್ಪಿ ಸೇರಿದಂತೆ ಎಲ್ಲಾ ಪೊಲೀಸರಿಗೆ ಕೃತಜ್ಞತೆ ಸಲ್ಲಿಸಿದರು. ಕಣ್ಣುಗಳಲ್ಲಿ ಆನಂದ ಬಾಷ್ಪ ಸುರಿಸಿದ್ದು ಕಂಡುಬಂತು.